ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ 2000 ರೂ. ಗೌರವಧನ ಹೆಚ್ಚಿಸುವ ಮೂಲಕ ಸರ್ಕಾರ, ದೀಪಾವಳಿ ಗಿಫ್ಟ್ ನೀಡಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ 62, 580 ಜನ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಸೇರಿ 1.28 ಲಕ್ಷ ಕಾರ್ಯಕರ್ತೆಯರಿದ್ದಾರೆ. 2018 ರ ಅಕ್ಟೋಬರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಲಾಗಿತ್ತು. ಈ ಪೈಕಿ ಶೇ.40 ರಷ್ಟು ರಾಜ್ಯ ಸರ್ಕಾರ, ಶೇ.60 ರಷ್ಟು ಕೇಂದ್ರ ಸರ್ಕಾರ ಗೌರವ ಧನ ನೀಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ 1500 ರೂ. ಹಾಗೂ ಈಗ 500 ರೂ. ಸೇರಿಸಿ 2000 ರೂ. ಗೌರವಧನ ಹೆಚ್ಚಳವಾಗಿ ನೀಡಲಾಗುವುದು. ಒಂದು ವರ್ಷ ತಡೆಹಿಡಿದ ಗೌರವಧನ ಕೂಡ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಯಾರಿಗೆ ಎಷ್ಟು ಹೆಚ್ಚಳ?:ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 8000 ರೂ. ಇತ್ತು. ಈಗ ರಾಜ್ಯ ಸರ್ಕಾರದ 1500 ರೂ. ಮತ್ತು ಕೇಂದ್ರ ಸರ್ಕಾರದ 500 ರೂ. ಸೇರಿ ಈಗ 10,000 ಗೌರವಧನ ಸಿಗಲಿದೆ. ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಈ ಹಿಂದೆ 4750 ರೂ. ಗೌರವ ಧನ ಇತ್ತು. ಈಗ ರಾಜ್ಯ ಸರ್ಕಾರದ 1250 ರೂ., ಕೇಂದ್ರ ಸರ್ಕಾರದ 500 ರೂ. ಸೇರಿ ಒಟ್ಟು 6500 ರೂ. ಗೌರವಧನ ಸಿಗಲಿದೆ. ಅಂಗನವಾಡಿ ಸಹಾಯಕಿಯರಿಗೆ ಈ ಹಿಂದೆ 4000 ರೂ. ಇತ್ತು. ಈಗ ರಾಜ್ಯ ಸರ್ಕಾರದಿಂದ 1000 ರೂ. ಕೇಂದ್ರದ 500 ರೂ. ಸೇರಿ ಒಟ್ಟು 5500 ರೂ. ಗೌರವ ಧನ ಸಿಗಲಿದೆ.
ಅಪೌಷ್ಟಿಕತೆ ಬಗ್ಗೆ ಆ್ಯಪ್ ಅಭಿವೃದ್ಧಿ:
ಶೇ.10-15 ರಷ್ಟು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಅಂಗನವಾಡಿಗೆ ಬರುತ್ತಿವೆ. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಇಲಾಖೆ ಹಾಗೂ ನಮ್ಮ ಇಲಾಖೆಗಳು ಜೊತೆಗೂಡಿ ಕೆಲಸ ಮಾಡಬೇಕಿದೆ. ಅದರ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಜೊತೆ ಚರ್ಚೆ ಕೂಡ ಮಾಡಲಾಗಿದೆ. ಮೊಬೈಲ್ ಆ್ಯಪ್ ಮೂಲಕ ರಾಜ್ಯದ ಯಾವುದೇ ಮಗು ಅಪೌಷ್ಟಿಕತೆಯ ವಿಚಾರದಲ್ಲಿ ಹೇಗೆ ಇದೆ ಎಂದು ಕುಳಿತಲ್ಲೇ ನೋಡಬಹುದು. ಆದರೆ ಇದೂವರೆಗೆ ಆ ಆ್ಯಪ್ ಕರ್ನಾಟಕಕ್ಕೆ ಬಂದಿಲ್ಲ. ಅದನ್ನ ರಾಜ್ಯದಲ್ಲಿ ಸಮರ್ಥವಾಗಿ ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.