ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ಹೆಚ್ಚಿನವರು ಸದ್ಯ ಯಶವಂಪತಪುರ ತಾಜ್ ವಿವಾಂತಾ ಹೋಟೆಲ್ನಲ್ಲಿಯೇ ತಂಗಿದ್ದಾರೆ. ಇವರನ್ನು ಸುರಕ್ಷಿತವಾಗಿ ಹೋಟೆಲ್ನಲ್ಲಿಯೇ ಉಳಿಯಲು ಸೂಚಿಸಲಾಗಿದ್ದು, ಅವರು ಹೊರ ಹೋಗದಂತೆ ತಡೆಯಲು ಅಗತ್ಯ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ.
ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಮನವೊಲಿಸುವ ಯತ್ನದಲ್ಲಿ ಬಹುತೇಕ ನಾಯಕರು ತೊಡಗಿಕೊಂಡಿರುವುದರಿಂದ, ಶಾಸಕರು ಇರುವ ಹೋಟೆಲ್ನತ್ತ ಯಾರೂ ಸುಳಿದಿಲ್ಲ. ಶಾಸಕರೆಲ್ಲಾ ಬೆಳಗ್ಗೆ ಎದ್ದು, ಹೋಟೆಲ್ ಒಳಗೇ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಯಾವ ಶಾಸಕರೂ ಹೋಟೆಲ್ನಿಂದ ಆಚೆ ಬಂದಿಲ್ಲ. ಎಲ್ಲರನ್ನೂ ಹೋಟೆಲ್ ಒಳಗೇ ಇರುವಂತೆ ಪಕ್ಷದ ನಾಯಕರು ಸೂಚಿಸಿದ್ದು, ಮಾಧ್ಯಮಗಳನ್ನೂ ಸಂಪರ್ಕಿಸಬೇಡಿ ಎಂದು ತಾಕೀತು ಮಾಡಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ. ಜಿ.ಪರಮೇಶ್ವರ್ ಸೇರಿದಂತೆ ಬಹುತೇಕ ನಾಯಕರು ಎಂಟಿಬಿ ನಾಗರಾಜ್ ಮನವೊಲಿಕೆಯಲ್ಲಿ ತೊಡಗಿದ್ದು, ಇದಲ್ಲದೇ ಕೆಲ ನಾಯಕರು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಕೂಡ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಹೋಟೆಲ್ನತ್ತ ಯಾರೂ ಬಂದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ವಿಶ್ರಾಂತಿಯಲ್ಲಿದ್ದು, ಮಧ್ಯಾಹ್ನದ ನಂತರ ತಮ್ಮ ಚಟುವಟಿಕೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿನಲ್ಲಿದ್ದು, ಕುಮಾರಕೃಪ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಅತೃಪ್ತರ ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಹೋಟೆಲ್ಲ್ಲಿರುವ ಶಾಸಕರತ್ತ ಹೆಚ್ಚಿನ ಗಮನ ಹರಿಸಿಲ್ಲ. ಆದರೆ ಇವರನ್ನು ಸುರಕ್ಷಿತವಾಗಿ ಹೋಟೆಲ್ನಲ್ಲಿಯೇ ಉಳಿಯಲು ಸೂಚಿಸಲಾಗಿದೆ. ಅವರು ಹೊರ ಹೋಗದಂತೆ ತಡೆಯಲು ಅಗತ್ಯ ಸಂಖ್ಯೆಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.