ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿಯೇ ಬೆಟ್ಟದಷ್ಟು, ತೆರವು ಮಾಡಿದ್ದು ಮಾತ್ರ ಎಳ್ಳಷ್ಟು! - ಕರ್ನಾಟಕದಲ್ಲಿ ಅರಣ್ಯ ಭೂಮಿ ಒತ್ತುವರಿ

ರಾಜ್ಯದಲ್ಲಿ ಲಕ್ಷಾಂತರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ಆ ಪೈಕಿ ತೆರವು ಆಗಿರುವುದು ಮಾತ್ರ ಎಳ್ಳಷ್ಟು. ಇದಕ್ಕೆ ಅರಣ್ಯ ಇಲಾಖೆಯ ಇಚ್ಛಾಶಕ್ತಿಯ ಕೊರತೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

forest land encroach in Karnataka,ಕರ್ನಾಟಕದಲ್ಲಿ ಅರಣ್ಯ ಭೂಮಿ ಒತ್ತುವರಿ
ಕರ್ನಾಟಕದಲ್ಲಿ ಅರಣ್ಯ ಭೂಮಿ ಒತ್ತುವರಿ

By

Published : Dec 9, 2021, 4:15 PM IST

ಬೆಂಗಳೂರು:ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಗ್ರಹಣ ಹಿಡಿದಂತಾಗಿದೆ. ಲಕ್ಷಾಂತರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ಆ ಪೈಕಿ ತೆರವು ಆಗಿರುವುದು ಮಾತ್ರ ಎಳ್ಳಷ್ಟು. ಇತ್ತ ಒಕ್ಕಲೆಬ್ಬಿಸಿದವರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರದ ಬಳಿ ಅನುದಾನವೇ ಇಲ್ಲದಂತಾಗಿದೆ.

ಅರಣ್ಯ ಭೂಮಿ ಒತ್ತುವರಿಯಲ್ಲಿ ಕರ್ನಾಟಕ ಅಗ್ರಗಣ್ಯ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದೆ. ಆದರೆ ಈ ಒತ್ತುವರಿ ತೆರವು ಕಾರ್ಯ ಮಾತ್ರ ನೆನೆಗುದಿಗೆ ಬಿದ್ದಿದೆ. ಅರಣ್ಯ ಇಲಾಖೆ ಒತ್ತುವರಿ ತೆರವು ಮಾಡುವಲ್ಲಿ ನಿರಾಸಕ್ತಿ ಹೊಂದಿರುವುದು ಎದ್ದು ಕಾಣುತ್ತಿದೆ. ಇನ್ನೊಂದೆಡೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವಿನ ಗೊಂದಲದಿಂದಲೂ ಅರಣ್ಯ ಭೂಮಿ ಒತ್ತುವರಿಗೆ ಗ್ರಹಣ ಹಿಡಿದಂತೆ ಆಗಿದೆ. ರಾಜ್ಯದಲ್ಲಿ ಅರಣ್ಯ ಇಲಾಖೆಯ ಭೂಮಿ, ಕಂದಾಯ ಇಲಾಖೆಯ ಭೂಮಿ, ಬಗರ್‌ ಹುಕುಂ ಸಮಿತಿಯಲ್ಲಿ ಮಂಜೂರಾಗಿರುವ ಭೂಮಿಗಳು ಯಾವುದು ಎಂಬ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಅರಣ್ಯ ಹಾಗೂ ಕಂದಾಯ ಇಲಾಖೆ ವಿಫಲವಾಗಿದೆ. ಇದರಿಂದಲೂ ಅರಣ್ಯ ಭೂಮಿ ಒತ್ತುವರಿ ತೆರವು ನೆನೆಗುದಿಗೆ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒತ್ತುವರಿ ಬೆಟ್ಟದಷ್ಟು, ತೆರವು ಎಳ್ಳಷ್ಟು!
ಹೌದು, ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಅರಣ್ಯ ಒತ್ತುವರಿಯಾಗಿದೆ. ಆದರೆ ಅವುಗಳ ತೆರವು ಕಾರ್ಯ ಮಾತ್ರ ಅತ್ಯಲ್ಪ ಪ್ರಮಾಣದಲ್ಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯ ಇಚ್ಛಾ ಶಕ್ತಿಯ ಕೊರತೆ ಪ್ರಮುಖ ಕಾರಣ ಎಂಬ ಆರೋಪಗಳಿವೆ.

(ಇದನ್ನೂ ಓದಿ: ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ: ಸಿಎಂ ಬೊಮ್ಮಾಯಿ)

ಅರಣ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಸುಮಾರು 2,00,800 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಆದರೆ, ಈ ಪೈಕಿ ಕೇವಲ 22,780 ಎಕರೆ ಭೂಮಿಯನ್ನು ಮಾತ್ರ ತೆರವು ಮಾಡಲಾಗಿದೆ. ಸುಮಾರು 1,78,020 ಎಕರೆ ಅರಣ್ಯ ಭೂಮಿ ತೆರವು ಮಾಡಲಾಗದೇ ಹಾಗೇ ಉಳಿದುಕೊಂಡಿದೆ.

ರಾಜ್ಯದಲ್ಲಿ ಅರಣ್ಯ ಭೂಮಿ ಒತ್ತುವರಿಯೇ ಬೆಟ್ಟದಷ್ಟು, ತೆರವು ಮಾಡಿದ್ದು ಮಾತ್ರ ಎಳ್ಳಷ್ಟು!

3 ಎಕರೆ ಕೆಳಗೆ ಸುಮಾರು 1,12,355 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಪೈಕಿ 3,634 ಎಕರೆ ಭೂಮಿಯನ್ನು ಮಾತ್ರ ತೆರವು ಮಾಡಲಾಗಿದೆ. ಇನ್ನೂ ಸುಮಾರು 1,08,721 ಎಕರೆ ಒತ್ತುವರಿ ಅರಣ್ಯ ಭೂಮಿ ತೆರವುಗೊಳಿಸದೇ ಹಾಗೇ ಬಾಕಿ ಉಳಿದುಕೊಂಡಿದೆ.

3 ಎಕರೆ ಮೇಲ್ಪಟ್ಟ ಸುಮಾರು 88,420 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪೈಕಿ 19,155 ಎಕರೆ ಒತ್ತುವರಿಯನ್ನು ಮಾತ್ರ ತೆರವು ಮಾಡಲು ಸಾಧ್ಯವಾಗಿದೆ. ಉಳಿದಂತೆ 69,255 ಎಕರೆ ಅರಣ್ಯ ಒತ್ತುವರಿ ಭೂಮಿ ತೆರವು ಆಗದೇ ಬಾಕಿ ಉಳಿದುಕೊಂಡಿದೆ.

ಒಕ್ಕಲೆಬ್ಬಿಸಿದವರ ಪುನರ್ವಸತಿಗೆ ಅನುದಾನವೇ ಇಲ್ಲ:
ರಾಜ್ಯದಲ್ಲಿ ಒಟ್ಟು 86,360 ಪ್ರಕರಣಗಳಲ್ಲಿ ಸುಮಾರು 1,12,355 ಎಕರೆಯಷ್ಟು 3 ಎಕರೆಗಿಂತ ಕಡಿ‌ಮೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ.‌ ಒಕ್ಕಲೆಬ್ಬಿಸಿದವರ ಪುನರ್ವಸತಿ ಪ್ಯಾಕೇಜುಗಳು ಅವರು ಅತಿಕ್ರಮಣ ಮಾಡಿದ ಭೂಮಿಯನ್ನು ಬಳಸುತ್ತಿರುವ ಚಟುವಟಿಕೆಯನ್ನು ಅವಲಂಬಿಸಿರುತ್ತದೆ. ಅದರಂತೆ 2017ರ ಆದೇಶದಂತೆ ಒಂದು ಕುಟುಂಬಕ್ಕೆ 15 ಲಕ್ಷ ರೂ.ನಂತೆ ಒಂದು ಬಾರಿ ಆರ್ಥಿಕ ಪುನರ್ವಸತಿ ಪ್ಯಾಕೇಜ್ ನೀಡಲಾಗಿರುತ್ತದೆ. ಆದ್ದರಿಂದ ಒಂದು ಬಾರಿ ಆರ್ಥಿಕ ಪುನರ್ವಸತಿ ಪ್ಯಾಕೇಜ್‌ನ 86,360 ಪ್ರಕರಣಗಳಿಗೆ ಒಟ್ಟು ಅಂದಾಜು 12,900 ಕೋಟಿ ರೂ. ನೀಡಬೇಕಾಗುತ್ತದೆ.

ಒಂದು ವೇಳೆ ವಿಶೇಷ ಭೂ ಪುನರ್ವಸತಿ ಪ್ಯಾಕೇಜ್ ಪರಿಗಣಿಸಿದರೆ 1,15,086 ಎಕರೆಗೆ ಬದಲಾಗಿ ಪರ್ಯಾಯ ಭೂಮಿಯನ್ನು ಒದಗಿಸಬೇಕಾಗುತ್ತದೆ. ಆದರೆ, ಅರಣ್ಯ ಇಲಾಖೆಯಲ್ಲಿ ಪರ್ಯಾಯ ಭೂಮಿ ನೀಡಲು ಅಥವಾ ವಿಶೇಷ ಪ್ಯಾಕೇಜ್ ನೀಡಲು ಅನುದಾನ ಇಲ್ಲವೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಹೀಗಾಗಿ ಪುನರ್ವಸತಿ ಮತ್ತು ಪುನರ್‌ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಬಾಹ್ಯ ಸಂಸ್ಥೆ ಅಥವಾ ಸೂಕ್ತ ಮಟ್ಟದ ಪ್ರಾಧಿಕಾರವನ್ನು ಗುರುತಿಸಬೇಕು. ಇದರಿಂದ ಅತಿಕ್ರಮಿಸಿದ ಅರಣ್ಯ ಭೂಮಿಯ ಮೇಲೆ ಕ್ರಮ ಕೈಗೊಳ್ಳಲು ಇಲಾಖೆಗೆ ಅನುಕೂಲವಾಗಲಿದೆ ಎಂದು ಕೋರಿದ್ದಾರೆ. ಆದರೆ ಸರ್ಕಾರ ಹಣಕಾಸು ಸಂಕಷ್ಟ ಎದುರಿಸುತ್ತಿರುವ ಕಾರಣ ಅನುದಾನ ಹಂಚಿಕೆ ಅನುಮಾನವಾಗಿರುವುದರಿಂದ ಅರಣ್ಯ ಇಲಾಖೆ ಅರಣ್ಯ ಒತ್ತುವರಿ ಭೂಮಿ ತೆರವು ಮಾಡಲಾಗದೇ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿ ಇದೆ.

ABOUT THE AUTHOR

...view details