ಕರ್ನಾಟಕ

karnataka

ETV Bharat / city

ದಿಢೀರ್​ ಶ್ರೀಮಂತರಾಗಲು ಅಡ್ಡದಾರಿ.. ಕಿಡ್ನಾಪ್​ ನೆಪದಲ್ಲಿ ಮಾಲೀಕನ ಮಗನ ಉಸಿರು ನಿಲ್ಲಿಸಿದ ಕಿರಾತಕರು ಅರೆಸ್ಟ್​

ಆರ್.ಆರ್ ನಗರ ರಾಜಕಾಲುವೆ ಬಳಿ ಯುವಕ ತರುಣ್ ಶವ ಪತ್ತೆ ಪ್ರಕರಣದ ಸಂಬಂಧ ಸಯೀದ್ ತಝಿಮುಲ್ಲಾ ಪಾಶ (39) ಮತ್ತು ಸೈಯದ್ ನಾಸೀರ್ (26) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

2 arrested in bangalore rr nagara tarun murder case
ತರುಣ್ ಕೊಲೆ ಪ್ರಕರಣದ ಆರೋಪಿಗಳು ಅರೆಸ್ಟ್

By

Published : Nov 6, 2021, 8:49 AM IST

ಬೆಂಗಳೂರು: ಆರ್.ಆರ್ ನಗರ ರಾಜಕಾಲುವೆ ಬಳಿ ಯುವಕ ತರುಣ್ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತಿ ನಗರದ ಮುರುಗಪಿಳ್ಳೆ ಪಾಳ್ಯದ ನಿವಾಸಿ ತರುಣ್ ಕೊಲೆ ಮಾಡಿದ ಆರೋಪದ ಮೇಲೆ ಸಯೀದ್ ತಝಿಮುಲ್ಲಾ ಪಾಶ (39) ಮತ್ತು ಸೈಯದ್ ನಾಸೀರ್ (26) ಎನ್ನುವ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿ.ಸಿ.ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಡಿ.ಸಿ.ಪಿ ಸಂಜೀವ್ ಪಾಟೀಲ್ ಮಾಹಿತಿ..

ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡಿದ್ದ ಯುವಕ ತರುಣ್ (21) ನವೆಂಬರ್ 1ರ ಬೆಳಗ್ಗೆ ಪೋಷಕರ ಬಳಿ ಹಣ ತೆಗೆದುಕೊಂಡು ಪಟಾಕಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದ. ರಾತ್ರಿಯಾದರೂ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ನಗರದ ಭಾರತಿ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.

ರಾಜಕಾಲುವೆ ಬಳಿ ಶವ ಪತ್ತೆ:

ಯುವಕ ತರುಣ್ ಮೂಗಿಗೆ, ಬಾಯಿಗೆ ಪ್ಲಾಸ್ಟರ್ ಸುತ್ತಿ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ನಂತರ ಗೋಣಿ ಚೀಲದಲ್ಲಿ ಸುತ್ತಿ ಆರ್.ಆರ್ ನಗರ ಠಾಣಾ ವ್ಯಾಪ್ತಿಯ ಡಿಸೋಜ ನಗರದ ರಾಜಕಾಲುವೆ ಬಳಿ ಆರೋಪಿಗಳು ಶವವನ್ನು ಬಿಸಾಕಿ ಹೋಗಿದ್ದರು.

ಮಂಗಳವಾರ ಚಿಂದಿ ಆಯುವ ವ್ಯಕ್ತಿ ರಾಜಕಾಲುವೆ ಪಕ್ಕ ಗೋಣಿ ಚೀಲದಲ್ಲಿ ಶವ ಇರುವ ಶಂಕೆಯಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದನು. ಸಾರ್ವಜನಿಕರು ಬಂದು ನೋಡಿ ಪೊಲೀಸರಿಗೆ ಫೋನ್ ಮೂಲಕ ತಿಳಿಸಿದ್ದರು. ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡಸಿ ಗೋಣಿ ಚೀಲ ತೆಗೆದು ನೋಡಿದಾಗ ಯುವಕನ ಶವ ಪತ್ತೆಯಾಗಿತ್ತು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ದಿಢೀರ್ ಶ್ರೀಮಂತರಾಗುವ ಯೋಜನೆ:

ಆರೋಪಿಗಳಾದ ತಝಿಮುಲ್ಲಾ ನಾಸೀರ್, ಸೈಯದ್ ನಾಸೀರ್​ನು ತರುಣ್ ತಂದೆ ಮಣಿ ಬಳಿ ಕೆಲಸ ಮಾಡುತ್ತಿದ್ದರು. ದಿಢೀರ್ ಶ್ರೀಮಂತರಾಗುವ ಯೋಚನೆ ಇಬ್ಬರಲ್ಲೂ ಇತ್ತೀಚೆಗೆ ಮೊಳಕೆ ಒಡೆದಿತ್ತು. ತರುಣ್ ತಂದೆ ಮಣಿ ತಕ್ಕ ಮಟ್ಟಿಗೆ ಶ್ರೀಮಂತರಾಗಿದ್ದರಿಂದ ಅವರ ಮಗನನ್ನೇ ಕಿಡ್ನ್ಯಾಪ್ ಮಾಡಿದರೆ ಹೇಗೆ ಎಂದು ಪ್ಲಾನ್ ಮಾಡಿದ್ದರು.

ತರುಣ್​ ಕೊಲೆ:

ನ. 1ರಂದು ಪಟಾಕಿ ಖರೀದಿಸಲು ಹೋಗಿದ್ದ ತರುಣ್​​ನನ್ನು ಹಿಂಬಾಲಿಸಿದ ಆರೋಪಿಗಳು ನಂತರ ಅವನ ಬಳಿ ಬಂದು ತಮ್ಮ ಅಕ್ಕನ ಮನೆಗೆ ಹೋಗೋಣ, ಅವರ ಮನೆಯ ಬಳಿಯೇ ಕಡಿಮೆ ಬೆಲೆಗೆ ಪಟಾಕಿ ಸಿಗುತ್ತವೆ ಎಂದು ಪುಸಲಾಯಿಸಿದ್ದರು. ನಂತರ ಅಕ್ಕನ ಮನೆಗೆ ತೆರಳಿ ತರುಣ್ ಜೊತೆ ಊಟ ಮಾಡಿದ್ದರು.

ಸ್ವಲ್ಪ ಸಮಯದ ಬಳಿಕ ತರುಣ್​ನ ಕೈಕಾಲು ಕಟ್ಟಿ ಹಾಕಿ, ಕಿರುಚಾಡಬಾರದೆಂದು ಮುಖಕ್ಕೆ ಪ್ಲಾಸ್ಟರ್ ಹಾಕಿದ್ದರು. ಆಗಲೂ ಕಿರುಚಾಡಲು ಪ್ರಯತ್ನಿಸಿದಾಗ ಕುತ್ತಿಗೆ ಹಿಸುಕಿದ್ದರು. ಬಾಯಿ ಮೂಗಿಗೂ ಸೇರಿಸಿ ಪ್ಲಾಸ್ಟರ್ ಹಾಕಿದ ಕಾರಣ ಉಸಿರಾಡಲು ಸಾಧ್ಯವಾಗದೇ ತರುಣ್ ಪ್ರಾಣ ಬಿಟ್ಟಿದ್ದ.

ಶವ ಎಸೆದು ಎಸ್ಕೇಪ್​:

ಹಣಕ್ಕಾಗಿ ಕಿಡ್ನ್ಯಾಪ್ ಮಾಡಿದ ಆರೋಪಿಗಳಿಗೆ ತರುಣ್​ನ ಸಾವು ಗಲಿಬಿಲಿ ಹುಟ್ಟಿಸಿತ್ತು. ಇಡೀ ರಾತ್ರಿ ಶವವನ್ನು ಮನೆಯಲ್ಲಿಟ್ಟುಕೊಂಡವರು ನಂತರ ಆಟೋದಲ್ಲಿ ಆರ್.ಆರ್. ನಗರ ವ್ಯಾಪ್ತಿಯಯಲ್ಲಿರುವ ವೃಷಭಾವತಿ ರಾಜಾಕಾಲುವೆ ಬಳಿ ತಂದಿದ್ದರು. ಶವದ ಮೂಟೆಯನ್ನು ಮೋರಿ ಬಳಿ ಬಿಸಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದರು.

ದೂರು:

ಭಾರತಿನಗರದಲ್ಲಿ ಪಟಾಕಿ ತರಲು ಹೋದ ಮಗ ವಾಪಸ್ ಬಂದಿಲ್ಲ ಎಂಬ ಕಾರಣಕ್ಕೆ ಅಲ್ಲಿ ಇಲ್ಲಿ ಹುಡುಕಾಡಿದ ಪೋಷಕರು ಕೊನೆಗೆ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಆರ್.ಆರ್ ನಗರ ಪೊಲೀಸರು ಶವದ ಫೋಟೋಗಳನ್ನು ಎಲ್ಲ ಠಾಣೆಗಳಿಗೆ ರವಾನೆ ಮಾಡಿದ್ದರು. ಬಳಿಕ ಪೊಲೀಸ್ ಸಿಬ್ಬಂದಿಗೆ ಭಾರತಿನಗರದ ನಿವಾಸಿ ತರುಣ್ ಎಂದು ಗೊತ್ತಾಗಿತ್ತು. ನಂತರ ತರುಣ್ ತಂದೆ ಮಣಿ ಸೇರಿದಂತೆ ಹಲವರಿಂದ ಸಿಬ್ಬಂದಿ ಮಾಹಿತಿ ಪಡೆದುಕೊಂಡಿದ್ದರು.

50 ಲಕ್ಷಕ್ಕೆ ಬೇಡಿಕೆ:

ಪೊಲೀಸರಿಗೆ ಶವ ದೊರೆತದ್ದು ನವೆಂಬರ್ 2ರ ಬೆಳಗ್ಗೆ. ಆದರೆ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ ಎನ್ನುವ ಭಂಡ ಧೈರ್ಯದಿಂದ ಮಧ್ಯಾಹ್ನ 2 ಗಂಟೆಗೆ ತರುಣ್ ತಂದೆಗೆ ಕರೆ ಮಾಡಿದ್ದ ಆರೋಪಿಗಳು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾರನೆಯ ದಿನ ತರುಣ್ ತಂದೆಯು ಅವರನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಕಿಡ್ನ್ಯಾಪ್ ವಿಚಾರ ಹೊರ ಬಿದ್ದಿದೆ.

ಇಬ್ಬರು ಹಂತಕ ಸಹೋದರರು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಇರುವ ಮಾಹಿತಿ ಪೊಲೀಸರಿಗೆ ಬಾತ್ಮಿದಾರರಿಂದ ದೊರೆತಿತ್ತು. ಫೋನ್ ಡಿಟೇಲ್ಸ್ ಟ್ರೇಸ್ ಮಾಡಿದಾಗ ಇಬ್ಬರು ಆರೋಪಿಗಳು ಬಸ್ ನಿಲ್ದಾಣದ ಹತ್ತಿರ ಇರುವುದು ಖಚಿತಪಟ್ಟಿತ್ತು. ದಾಳಿ ನೆಡೆಸಿದ ಪೊಲೀಸ್ ಇನ್ಸ್​​ಪೆಕ್ಟರ್​ ಶಿವಣ್ಣ ನೇತೃತ್ವದ ತಂಡ ಆರೋಪಿಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆ ನೆಡೆಸಿದಾಗ ಕೊಲೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿಡಿದ್ದೇವೆ. ಸಾಥ್ ನೀಡಿದವರಿಗಾಗಿಯೂ ಬಲೆ ಬೀಸಿದ್ದೇವೆ ಎಂದು ಡಿ.ಸಿ.ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಆರ್.ಆರ್ ನಗರ ಠಾಣೆಯ ಸಿಬ್ಬಂದಿಗೆ ಅಭಿನಂದನೆ:

ಈ ಪ್ರಕರಣ ಬಯಲಿಗೆಳೆದ ಇನ್ಸ್​ಪೆಕ್ಟರ್​​ ಶಿವಣ್ಣ ಮತ್ತು ಆರ್.ಆರ್. ನಗರ ಪೊಲೀಸ್ ಸಿಬ್ಬಂದಿಗೆ ಸಂಜೀವ್ ಪಾಟೀಲ್ ಅಭಿನಂದಿಸಿದ್ದಾರೆ.

ಇದನ್ನೂ ಓದಿ:ರಾಜಕಾಲುವೆ ಬಳಿ ದೊರೆತಿದ್ದ ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು

ABOUT THE AUTHOR

...view details