ಬೆಂಗಳೂರು:ಕಳೆದ 15 ತಿಂಗಳುಗಳಲ್ಲಿ ಸಮಿತಿಯು ಸರ್ವೋಚ್ಛ ನ್ಯಾಯಾಲಯಕ್ಕೆ ತಮ್ಮ 12 ವರದಿಗಳನ್ನು ಸಲ್ಲಿಸಿದೆ. ಈ ವರದಿಗಳನ್ನು ಸರ್ವೋಚ್ಛ ನ್ಯಾಯಾಲಯವು ಪರಿಗಣಿಸಿ 2014-18 ರ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ.ಶಿವರಾಮ ಕಾರಂತ ಬಡಾವಣೆಯ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. 17 ಗ್ರಾಮಗಳ 1,475 ಕಟ್ಟಡಗಳಿಗೆ ಅನುಮೋದನೆ ನೀಡಿದೆ ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶವನ್ನು ಎಲ್ಲ ಅರ್ಜಿದಾರರಿಗೆ ಎಸ್ಎಂಎಸ್ ಮೂಲಕ ತಿಳಿಸಲಾಗಿದೆ. ಈ ಎಲ್ಲ ಕಟ್ಟಡಗಳ ಪ್ರಮಾಣ ಪತ್ರವನ್ನು ಶೀಘ್ರದಲ್ಲಿ ವಿತರಿಸಲು ಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಈ ಸಕ್ರಮ ಪ್ರಮಾಣ ಪತ್ರಗಳನ್ನು ಡಾ.ಶಿವರಾಮ ಕಾರಂತ ಬಡಾವಣೆ ಅಧಿಸೂಚಿತ ಪ್ರದೇಶದಲ್ಲಿ ಕಟ್ಟಡವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ವಿತರಿಸುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ತಿಳಿಸಿದರು.
ಕಟ್ಟಡ ಸಕ್ರಮಕ್ಕಾಗಿ 7,161 ಅರ್ಜಿ: ಈವರೆಗೂ ಉದ್ದೇಶಿತ ಬಡಾವಣೆಯ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 7,161 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬದಲಿ ನಿವೇಶನ ನೀಡುವುದಕ್ಕೆ 2,248 ಅರ್ಜಿಗಳು ಬಂದಿವೆ. ಸಾರ್ವಜನಿಕರಿಂದ 2022ರ ಏಪ್ರಿಲ್ 8ರಂದು ಅರ್ಜಿಗಳ ಸ್ವೀಕರಿಸಲು ಕೊನೆಯ ದಿನವಾಗಿತ್ತು. ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಆ ನಂತರ ಬಂದ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಬಿಡಿಎ ಅನುಮೋದಿತ 13 ಬಡಾವಣೆ ಸ್ವಾಧೀನವಿಲ್ಲ:ಡಾ.ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಬಿಡಿಎ ಅನುಮೋದಿತ 13 ಬಡಾವಣೆಗಳು ಮತ್ತು ನಿರ್ಮಾಣ ಹಂತದಲ್ಲಿರುವ 2 ಬಹುಮಹಡಿ ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಸರ್ವೋಚ್ಛ ನ್ಯಾಯಾಲಯವು ಬಿಡಿಎಗೆ ಆದೇಶ ನೀಡಿದೆ ಎಂದು ತಿಳಿಸಿದರು.
ಬಡಾವಣೆ 3 ರೀತಿಯಲ್ಲಿ ವರ್ಗೀಕರಣ: ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಕಟ್ಟಡಗಳನ್ನು 2014ಕ್ಕೆ ಮುನ್ನ 2014 ಮತ್ತು 2018ರ ನಡುವೆ ಹಾಗೂ 2018ರ ನಂತರ ನಿರ್ಮಾಣ ಎಂದು ವರ್ಗೀಕರಣ ಮಾಡುವ ಕಾರ್ಯವನ್ನು ಜೆಸಿಸಿ ಮುಂದುವರಿಸಿದೆ. ಈ ವರ್ಗೀಕರಣದ ಆಧಾರದ ಮೇಲೆ ಸೂಕ್ತ ಆದೇಶಗಳಿಗಾಗಿ ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ವಿವರಿಸಿದರು.
ಜೆಸಿಸಿ ನೀಡಿದ ವರದಿ ಆಧಾರದಲ್ಲಿ ಸರ್ವೋಚ್ಛ ನ್ಯಾಯಾಲಯವು ಆವಲಹಳ್ಳಿಯಲ್ಲಿ 25 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದೆ. ಈ ಜಾಗವು ಬಿಎಂಎಸ್ ಎಜುಕೇಶನ್ ಟ್ರಸ್ಟ್ ಸೇರಿದ ಜಾಗವಾಗಿದ್ದು, ಇದು ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಭಾಗವಾಗಿದೆ. ಈ ಟ್ರಸ್ಟ್ ಎಲ್ಲಾ ಅಗತ್ಯವಾದ ಅನುಮತಿ ಮತ್ತು ಅನುಮೋದನೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆದುಕೊಂಡಿದೆ. ಬಿಡಿಎದಿಂದ ಡಿ.15 ರಂದು ಯೋಜನಾ ಅನುಮತಿಯನ್ನು ಪಡೆದುಕೊಂಡು ದಾಖಲೆಗಳನ್ನು ಸಲ್ಲಿಸಿದೆ ಎಂದು ಹೇಳಿದರು.