ಬೆಂಗಳೂರು: ಕೋವಿಡ್ ಸೋಂಕಿನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಸೌಧದಲ್ಲಿ ನಡೆದ 'ವಿಶ್ವ ಕ್ಷಯರೋಗ ದಿನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ನಿಂದ ಗುಣಮುಖರಾದವರಿಗೆ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದಲೇ ಕ್ಷಯ ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಗೊಳಪಟ್ಟ 25 ಲಕ್ಷ ಜನರಲ್ಲಿ 144 ಜನರಿಗೆ ರೋಗ ದೃಢಪಟ್ಟಿದೆ. ಕೋವಿಡ್ ಸೋಂಕು ಬಂದ ಬಳಿಕವೇ ಇವರಿಗೆ ಕ್ಷಯ ಬಂದಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಕೋವಿಡ್‌ನಂತೆಯೇ ಕ್ಷಯವೂ ಸಾಂಕ್ರಾಮಿಕ ರೋಗ. ಕೋವಿಡ್ ವೈರಸ್ನಿಂದ ಬಂದರೆ, ಕ್ಷಯವು ಬ್ಯಾಕ್ಟೀರಿಯಾದಿಂದ ಬರುತ್ತದೆ. 2030ರ ವೇಳೆಗೆ ಜಗತ್ತನ್ನು ಕ್ಷಯರೋಗದಿಂದ ಮುಕ್ತ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2025ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡಬೇಕೆಂಬ ಗುರಿ ಹೊಂದಿದೆ ಎಂದರು.
ಕೂಡಲೇ ಚಿಕಿತ್ಸೆ ಪಡೆಯಿರಿ:ದೇಶವನ್ನು ಕ್ಷಯಮುಕ್ತ ಮಾಡುವುದು ಕೇವಲ ವೈದ್ಯರು ಅಥವಾ ಸರ್ಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ. ಹೀಗಾಗಿ ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಸಂಜೆ ಜ್ವರ, ತೂಕ ಇಳಿಕೆಯಾಗುವುದು ಮೊದಲಾದ ಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕೆಂದು ಡಾ.ಸುಧಾಕರ್ ಸಲಹೆ ನೀಡಿದರು.
ಒಬ್ಬ ಕ್ಷಯ ರೋಗಿಯಿಂದ ಕನಿಷ್ಠ 10 ಜನರಿಗೆ ರೋಗ ಹರಡಬಹುದು. ಹೀಗಾದಲ್ಲಿ, ಒಬ್ಬರ ತಪ್ಪಿನಿಂದ ಎಲ್ಲರಿಗೂ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ. ರಾಜ್ಯ ಸರ್ಕಾರ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಕ್ಕೆ 5 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡುತ್ತಿದೆ ಎಂದರು.
ಕ್ಷಯ ನಿಯಂತ್ರಣದಲ್ಲಿ ರಾಜ್ಯದ ಐದು ಜಿಲ್ಲೆಗಳಿಗೆ ಬೆಳ್ಳಿ ಪದಕ ಬಂದಿದೆ. ಈ ಜಿಲ್ಲೆಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಪ್ರಮಾಣ ಶೇ.40ರಷ್ಟು ಇಳಿಕೆಯಾಗಿದೆ. ಇದೇ ರೀತಿ 9 ಜಿಲ್ಲೆಗಳಿಗೆ ಕಂಚಿನ ಪದಕ ಲಭಿಸಿದೆ. ಒಟ್ಟು 14 ಜಿಲ್ಲೆಗಳಲ್ಲಿ ಕ್ಷಯ ನಿಯಂತ್ರಣದಲ್ಲಿ ಗಮನಾರ್ಹ ಸಾಧನೆಯಾಗಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚು ಕ್ರಮ ಕೈಗೊಂಡು ಚಿನ್ನದ ಪದಕ ಪಡೆಯುವಂತಾಗಬೇಕೆಂದು ಸಚಿವರು ಹೇಳಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಸಚಿವರ ಗೈರು : ಸ್ಪೀಕರ್ ಅಸಮಾಧಾನ