ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ನಾಡಿನ ಜನತೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ದೇಣಿಗೆ ನೀಡುತ್ತಿದ್ದು, ಆಗಸ್ಟ್ 9 ರಿಂದ ಸೆಪ್ಟೆಂಬರ್ 18 ರ ವರೆಗೆ ಒಟ್ಟು 137.32 ಕೋಟಿ ರೂ. ಜಮಾ ಆಗಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ನೌಕರರು, ವಿವಿಧ ನಿಗಮ-ಮಂಡಳಿಗಳ ನೌಕರರು ಉದಾರವಾಗಿ ದೇಣಿಗೆ ನೀಡಿದ್ದಾರೆ. ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 25 ಕೋಟಿ ರೂ., ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ 10 ಕೋಟಿ ರೂ., ಎನ್ಎಂಡಿಸಿ 10 ಕೋಟಿ ರೂ. ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 5 ಕೋಟಿ ರೂ. ದೇಣಿಗೆ ನೀಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘದವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಒಂದು ದಿನದ ವೇತನ ನೀಡುವುದಾಗಿ ಹೇಳಿದ್ದಾರೆ. ನಿಗಮ, ಮಂಡಳಿಗಳು ಸಹ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಿದ್ದಾರೆ ಎಂದು ಸಿಎಂ ಕಚೇರಿಯಿಂದ ತಿಳಿದುಬಂದಿದೆ.
ಉದ್ಯಮಿಗಳು, ಸೇವಾ ಸಂಸ್ಥೆಗಳು, ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರ ನೆರವಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. ದೇಣಿಗೆ ನೀಡಲು ಬಯಸುವವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ನಲ್ಲಿ ದೇಣಿಗೆ ಜಮಾ ಮಾಡಬಹುದು. ಅಥವಾ ಚೆಕ್ ಅಥವಾ ಡಿಡಿ ಮೂಲಕವೂ ದೇಣಿಗೆ ನೀಡಬಹುದು ಎಂದು ವಿವರವನ್ನು ನೀಡಲಾಗಿದೆ.