ಬೆಂಗಳೂರು: ನಗರದ ದಾಸರಹಳ್ಳಿ ವಲಯದ ಅಭಿವೃದ್ಧಿ ಕಾಮಗಾರಿಗಾಗಿ 110 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ರಸ್ತೆಗಳು ಹಾಳಾಗಿದ್ದರೂ ದುರಸ್ತಿ ಮಾಡುತ್ತಿಲ್ಲ ಎಂದು ಆರೋಪಿಸಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಸರ್ಕಾರ ಪರ ವಕೀಲರು ಈ ಬಗ್ಗೆ ವಾದ ಮಂಡಿಸಿ, ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ 1050 ಕೋಟಿ ರೂ. ಹಣವನ್ನು 2021ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದಾಸರಹಳ್ಳಿ ವಲಯದ ಅಭಿವೃದ್ಧಿ ಕಾಮಗಾರಿಗಳಿಗೆ 110 ಕೋಟಿ ರೂಪಾಯಿ ಬಿಡುಗಡೆ ಮಾಡಿ 2022ರ ಫೆ.25ರಂದು ಆದೇಶಿಸಲಾಗಿದೆ ಎಂದು ತಿಳಿಸಿದರು.