ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಲಸೆ ಕಾರ್ಮಿಕರು,ಕಟ್ಟಡ ಕಾರ್ಮಿಕರು, ಕೊಳಗೇರಿ ಪ್ರದೇಶದ ಜನರಿಗೆ ಆರೋಗ್ಯ ತಪಾಸಣೆ ನಡೆಸಲು ಹನ್ನೊಂದು ಸಂಚಾರಿ ವಾಹನಗಳನ್ನು ಭಾರತೀಯ ಜೈನ್ ಸಂಘಟನೆ ಪಾಲಿಕೆಗೆ ವ್ಯವಸ್ಥೆ ಮಾಡಿಕೊಟ್ಟಿದೆ.
ಬಿಬಿಎಂಪಿಯಲ್ಲಿ 11 ಸಂಚಾರಿ ಉಚಿತ ತಪಾಸಣಾ ವಾಹನಗಳಿಗೆ ಚಾಲನೆ
ಭಾರತೀಯ ಜೈನ್ ಸಂಘಟನೆ ಬಿಬಿಎಂಪಿಗೆ 11 ಸಂಚಾರಿ ಉಚಿತ ತಪಾಸಣಾ ವಾಹನಗಳನ್ನ ವ್ಯವಸ್ಥೆ ಮಾಡಿಕೊಟ್ಟಿದೆ.
ಇದರೊಂದಿಗೆ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್, ಜಿತೋ ಸಂಘಟನೆಗಳು ಪಾಲಿಕೆ ಜೊತೆಗೆ ಸಹಕರಿಸಿದೆ. ಇಂದು ಮೇಯರ್ ಗೌತಮ್ ಕುಮಾರ್ ಹಾಗೂ ಭಾರತೀಯ ಜೈನ್ ಸಂಘಟನೆ ಬೆಂಗಳೂರು ಅಧ್ಯಕ್ಷರಾದ ವಿನೋದ್ ಪೊರ್ವಾಲ್ ಸಂಚಾರಿ ಉಚಿತ ತಪಾಸಣಾ ವಾಹನಗಳಿಗೆ ಚಾಲನೆ ನೀಡಿದರು. ಕೊರೊನಾ ತಪಾಸಣೆ ನಡೆಸಲು ಈಗಾಗಲೇ ಪಾಲಿಕೆ ವತಿಯಿಂದ 7 ಸಂಚಾರಿ ತಪಾಸಣಾ ವಾಹನಗಳನ್ನ ನಿಯೋಜಿಸಲಾಗಿದೆ. ಅದಲ್ಲದೇ ಹಲವಾರು ಸಂಘ-ಸಂಸ್ಥೆಗಳು ಸೇವಾ ಮನೋಭಾವದಿಂದ ಮುಂದೆ ಬಂದು ಹಲವಾರು ಸೇವೆಗಳನ್ನು ಮಾಡುತ್ತಿವೆ. ಇದೀಗ ಭಾರತೀಯ ಜೈನ್ ಸಂಘಟನೆ ಪಾಲಿಕೆ ಸಹಯೋಗದೊಂದಿಗೆ 11 ಸಂಚಾರಿ ತಪಾಸಣಾ ವಾಹನಗಳನ್ನ ವ್ಯವಸ್ಥೆ ಮಾಡಲಾಗಿದೆ ಎಂದು ಮೇಯರ್ ತಿಳಿಸಿದರು.
ಭಾರತೀಯ ಜೈನ್ ಸಂಘಟನೆಯು ಲಾಕ್‌ಡೌನ್ ಮುಗಿಯುವವರೆಗೆ ಉಚಿತವಾಗಿ ವಾಹನಗಳು ಹಾಗೂ ಅಗತ್ಯ ಔಷಧಗಳ ವ್ಯವಸ್ಥೆ ಕಲ್ಪಿಸಲಿದ್ದು, ಪಾಲಿಕೆ ವತಿಯಿಂದ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ವಾಹನದಲ್ಲೂ 3 ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಪಾಲಿಕೆ ವತಿಯಿಂದ ಈಗಾಗಲೇ “ಬಿಬಿಎಂಪಿ ಟೆಲಿ ಹೆಲ್ತ್” ಲೈನ್ 07447118949ಗೆ ಚಾಲನೆ ನೀಡಿದ್ದು, ಅದರಂತೆ ಈ ಸಂಚಾರಿ ತಪಾಸಣಾ ಸೇವೆಯನ್ನು ಲಿಂಕ್ ಮಾಡಿಕೊಂಡು ಕಾರ್ಯನಿರ್ವಹಿಸಲು ಮೇಯರ್ ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.