ದೊಡ್ಡಬಳ್ಳಾಪುರ: ಸಾಧಿಸುವ ಛಲವಿದ್ದರೆ ಆಗಸದಷ್ಟು ಅವಕಾಶ ಎಂಬುದಕ್ಕೆ ಈ ರೈತ ಮಹಿಳೆಯೇ ಸಾಕ್ಷಿ. ದೊಡ್ಡಬಳ್ಳಾಪುರ ನಗರವನ್ನು ರೇಷ್ಮೆ ನಗರಿ ಎಂದು ಕರೆಯಲಾಗುತ್ತೆ. ಆದರೆ ಗ್ರಾಮೀಣ ಭಾಗದಲ್ಲಿ ರೇಷ್ಮೆ ಕೃಷಿ ಅಷ್ಟಕಷ್ಟೇ. ಈ ನಡುವೆ, ತಾಲೂಕಿನ ಮಹಿಳೆಯೊಬ್ಬರು ರೇಷ್ಮೆ ಕೃಷಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ ಅವರಿಗೆ ಮಹಿಳಾ ವಿಭಾಗದಲ್ಲಿ ರೇಷ್ಮೆ ಕೃಷಿ ಸಾಧನೆ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿದೆ. ಇದರ ಜೊತೆಗೆ ತಾಲೂಕಿನ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಅವರಿಗೆ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ ಲಭಿಸಿದೆ.
ರತ್ನಮ್ಮ ರಾಮಯ್ಯನವರು ಕಳೆದ 25 ವರ್ಷದಿಂದ ರೇಷೆ ಕೃಷಿ ಮಾಡುತ್ತಿದ್ದಾರೆ. ಇವರ ಇಡೀ ಕುಟುಂಬ ರೇಷ್ಮೆ ಕೃಷಿಯಲ್ಲಿ ತೊಡಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನವನ್ನು ನೆನೆಯುವ ರತ್ನಮ್ಮ ಕುಟುಂಬ ರೇಷ್ಮೆ ಕೃಷಿಯ ಖುಷಿ ಹಂಚಿಕೊಂಡರು.