ಕರ್ನಾಟಕ

karnataka

ETV Bharat / city

108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ನಾಳೆ ಅಡಿಗಲ್ಲು: ಡಿಸಿಎಂ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಒಂದೇ ವರ್ಷದಲ್ಲಿ ಯೋಜನೆ ಮುಗಿಸಿ ಮುಂದಿನ ವರ್ಷ ಕೆಂಪೇಗೌಡ ಜಯಂತಿ ದಿನದಂದು ಲೋಕಾರ್ಪಣೆ ಮಾಡಲಾಗುವುದು. ಹಾಗೆಯೇ ಕೆಂಪೇಗೌಡರ ಜನ್ಮಸ್ಥಳ ಮತ್ತು ಸಮಾಧಿ, ಕೆಂಪಾಪುರ ಕೆರೆ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​​ ನಾರಾಯಣ ಹೇಳಿದರು.

Deputy Chief Minister Dr Ashwath Narayana
ಉಪಮುಖ್ಯಮಂತ್ರಿ ಡಾ.ಅಶ್ವತ್ಥ್​​ ನಾರಾಯಣ

By

Published : Jun 26, 2020, 3:27 PM IST

Updated : Jun 26, 2020, 5:45 PM IST

ಬೆಂಗಳೂರು: ಕೆಂಪೇಗೌಡರ 511ನೇ ಜಯಂತಿ ಅಂಗವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ 23 ಎಕರೆ ಪ್ರದೇಶದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​​ ನಾರಾಯಣ ಹೇಳಿದರು.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಪೂರ್ಣಗೊಳಿಸಿ 2021ಕ್ಕೆ ಸಾರ್ವಜನಿಕರ ಸೇವೆಗೆ ಸಮರ್ಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ನಾಳೆ ಬೆಳಗ್ಗೆ 10.30ಕ್ಕೆ ನಡೆಯುವ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಜಾಗದಲ್ಲಿ 50 ಮಂದಿಗಿಂತ ಹೆಚ್ಚು ಜನಸಂಖ್ಯೆ ಮೀರದಂತೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದ ಅವರು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಉಸ್ತುವಾರಿಯನ್ನು ವಹಿಸಲಿದ್ದು, ಇದಕ್ಕಾಗಿ ₹ 66 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​​ ನಾರಾಯಣ ಮಾತು

2019-20ನೇ ಸಾಲಿನ ಬಜೆಟ್​​​ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಅನುದಾನವನ್ನು ಸರ್ಕಾರ ಘೋಷಿಸಿತ್ತು. ವಿಧಾನಸೌಧದ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಮಾಡಿದ ಖ್ಯಾತ ಶಿಲ್ಪಿ ರಾಮ ಸುತಾರ್ ಅವರಿಗೆ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ. ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದರು.

ಕಾಮಗಾರಿ ಆರಂಭಿಸುವುದಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಒಪ್ಪಿಗೆಯೂ ನೀಡಿದೆ. ಪ್ರತಿಮೆ ಸುತ್ತ ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಪ್ರಮುಖ ಆಕರ್ಷಣೆಗಳಲ್ಲೊಂದು ಆಗಲಿದೆ ಎಂದ ಅವರು, 6.3 ಎಕರೆ ಜಾಗದ ದೀರ್ಘಾವಧಿ ಗುತ್ತಿಗೆಯನ್ನು ಪಡೆಯಲಾಗಿದೆ. ಈ ಜಾಗದಲ್ಲಿ ಮುಂದಿನ 18 ತಿಂಗಳಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಮನರಂಜನಾ ತಾಣ ನಿರ್ಮಾಣ ಮಾಡಲಾಗುತ್ತಿದೆ.

ಆರೂವರೆ ಎಕರೆ ಜಾಗದಲ್ಲಿ ಬ್ಯುಸಿನೆಸ್ ಪಾರ್ಕ್, ಹೋಟೆಲ್, ಕ್ರೀಡಾಂಗಣ, ಸಿನಿಮಾ ಥಿಯೇಟರ್, 9 ಸಾವಿರ ಸಾಮರ್ಥ್ಯದ ಬೃಹತ್ ಸಭಾಂಗಣ, ಎರಡು ಸಾವಿರ ಸಾಮರ್ಥ್ಯದ ಸಭಾಂಗಣ ಇರಲಿದೆ ಎಂದು ತಿಳಿಸಿದರು.

ಕೆಂಪೇಗೌಡರು ಬೆಂಗಳೂರನ್ನು ಮುಂದಿನ ಶತ-ಶತಮಾನಗಳ ಮುನ್ನೋಟದಿಂದ ನಿರ್ಮಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ ಎಂದ ಡಿಸಿಎಂ, ಕೆಂಪೇಗೌಡರನ್ನು ಈಗಿನ‌ ಹಾಗೂ ಮುಂದಿನ ತಲೆಮಾರಿನ ಯುವ ಜನತೆಗೆ ಪರಿಚಯಿಸಬೇಕು. ದೇಶ ವಿದೇಶಗಳಿಂದ ಬರುವ ಜನರಿಗೆ ನಾಡಪ್ರಭು ಕೆಂಪೇಗೌಡರ ಕುರಿತು ವಿವರಿಸಬೇಕು. ಅವರ ಅಭಿವೃದ್ಧಿ ಮಾದರಿ, ಜನಪರ ಆಡಳಿತ, ರಾಜಕೀಯ ಮೌಲ್ಯಗಳು, ವ್ಯಾಪಾರ- ವಾಣಿಜ್ಯ ಚಟುವಟಿಕೆ ಇತ್ಯಾದಿಗಳು ಉಳಿಯಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.

ಕೇವಲ ಸಾಂಕೇತಿಕ ಪ್ರತಿಮೆ. ಅವರ ಇತಿಹಾಸ ಪರಂಪರೆಯನ್ನು ಸಾರುವ ಜೊತೆಗೆ ಕನ್ನಡ, ಇಂಗ್ಲಿಷ್​​ನಲ್ಲಿ ಅವರ ಸಾಹಿತ್ಯದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ದೃಶ್ಯರೂಪದ ಧ್ವನಿ-ಬೆಳಕಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

Last Updated : Jun 26, 2020, 5:45 PM IST

ABOUT THE AUTHOR

...view details