ಕರ್ನಾಟಕ

karnataka

ETV Bharat / city

ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಒಂದು ಸಾವಿರ ಎಂಬಿಬಿಎಸ್‌ ಸೀಟು ಮಂಜೂರು ...! - undefined

ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 1000 ಎಂಬಿಬಿಎಸ್‌ ಸೀಟುಗಳನ್ನು ಕೇಂದ್ರ ಮಂಜೂರು ಮಾಡಿದ್ದು, ರಾಜ್ಯದ ಹದಿನೆಂಟು ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿದ್ದ ಸೀಟುಗಳ ಪ್ರಮಾಣ ಶೇ. 10 ರಿಂದ 15 ರಷ್ಟು ಹೆಚ್ಚಳವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

By

Published : Jul 2, 2019, 1:43 PM IST

ಬೆಂಗಳೂರು: ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ನೀಟ್‌ ಪದ್ಧತಿ ಜಾರಿಗೆ ಬಂದ ನಂತರ ಕಂಗಾಲಾಗಿದ್ದ ರಾಜ್ಯಕ್ಕೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 1000 ಎಂಬಿಬಿಎಸ್‌ ಸೀಟುಗಳನ್ನು ಕೇಂದ್ರ ಮಂಜೂರು ಮಾಡಿದೆ. ಇದರಿಂದಾಗಿ ರಾಜ್ಯದ ಹದಿನೆಂಟು ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿದ್ದ ಸೀಟುಗಳ ಪ್ರಮಾಣ ಶೇ. 10 ರಿಂದ 15 ರಷ್ಟು ಹೆಚ್ಚಳವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ರಾಜ್ಯದ ಮೆಡಿಕಲ್‌ ಕಾಲೇಜುಗಳಲ್ಲಿ ಈಗಿದ್ದ ಸೀಟುಗಳ ಸಂಖ್ಯೆ 4 ಸಾವಿರದಷ್ಟು. ಕೇಂದ್ರದ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ನೀಡಿದ ಈ ಕೊಡುಗೆಯಿಂದ ಇದೀಗ 5 ಸಾವಿರಕ್ಕೆ ತಲುಪಲಿದೆ. ಹೈದರಾಬಾದ್‌ ಕರ್ನಾಟಕಕ್ಕೆ ನೀಡಿದ 371 (ಜೆ) ಸ್ಥಾನಮಾನದ ಹಿನ್ನೆಲೆಯಲ್ಲಿ ದಕ್ಕಿದ ಸೀಟುಗಳು ಇದರ ಜೊತೆಗೆ ಸೇರ್ಪಡೆಗೊಂಡಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರಾಜ್ಯದ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಸೀಟುಗಳನ್ನು ನೀಡಲಾಗುತ್ತಿದ್ದು, ಇದರಿಂದಾಗಿ ಸುಮಾರು 2000 ಮಂದಿಗೆ ಎಂಬಿಬಿಎಸ್ ಸೀಟುಗಳು ಸಿಗುತ್ತಿದ್ದವು. ಆದರೆ, ಈಗಿನ ಬೆಳವಣಿಗೆಯಿಂದ ಹೆಚ್ಚಳವಾಗಿ ಶೇ. 50 ರಷ್ಟು ಸೀಟುಗಳು ಸಿಗುವುದರಿಂದ ಕರ್ನಾಟಕದ ಎರಡೂವರೆ ಸಾವಿರ ಮಂದಿ ವೈದ್ಯಕೀಯ ಸೀಟು ಪಡೆಯಲಿದ್ದಾರೆ. ಇತ್ತೀಚೆಗೆ ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿದ ಎಂ.ಸಿ.ಐ ತಂಡ ಇಲ್ಲಿನ ವ್ಯವಸ್ಥೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ವರದಿ ನೀಡಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ವೈದ್ಯಕೀಯ ಸೀಟುಗಳನ್ನು ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದ್ದ ಬೋಧನಾ ಸಿಬ್ಬಂದಿ ಕೊರತೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ತ್ವರಿತವಾಗಿ ಬಗೆಹರಿಸಿದ್ದು, ಈ ರೀತಿ ಹೆಚ್ಚುವರಿ ಸೀಟುಗಳು ದಕ್ಕಲು ಮುಖ್ಯ ಕಾರಣವಾಗಿದೆ.

ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಕೊರತೆಯಿದ್ದ ಬೋಧಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದ್ದು, ವಾಕ್‌ ಇನ್‌ ಇಂಟರ್‌ ವ್ಯೂ ಮೂಲಕ ಅವರ ಸೇವೆಯನ್ನು ಖಾಯಂಗೊಳಿಸುವ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಗಂಭೀರ ಪರಿಶೀಲನೆ ನಡೆಸಿದೆ.

ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ನೀಟ್‌ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಮೇಲೆ ಕರ್ನಾಟಕದ ವಿದ್ಯಾರ್ಥಿಗಳಿಗೆ ದಕ್ಕುವ ಸೀಟುಗಳ ಸಂಖ್ಯೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು, ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಸ್ವಾಯತ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಕೋರಿತ್ತು. ಸರ್ಕಾರದ ಮನವಿಯನ್ನು ಈ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಒಪ್ಪಿದ್ದು ಮಾತ್ರವಲ್ಲದೆ, ಶುಲ್ಕದ ಪ್ರಮಾಣವನ್ನು ಕೂಡ ಶೇ. 15 ರಷ್ಟು ಹೆಚ್ಚಳ ಮಾಡಲು ಅನುಮತಿ ಪಡೆದಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

For All Latest Updates

TAGGED:

ABOUT THE AUTHOR

...view details