ಬೆಂಗಳೂರು:ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎನ್ನುವ ಪ್ರಬಲ ಕೂಗು ಪಕ್ಷದಲ್ಲಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ, ಸಚಿವ ಸಂಪುಟ ವಿಸ್ತರಣೆಯಲ್ಲಿ ಕೇವಲ ರಾಜೀನಾಮೆ ಕೊಟ್ಟು ಬಂದಿರುವ 10 ಶಾಸಕರಿಗೆ ಮಾತ್ರ ಅವಕಾಶ ನೀಡಿ ಮೂಲ ಬಿಜೆಪಿ ಖೋಟಾದ ಮೂರು ಸ್ಥಾನಗಳನ್ನು ನಂತರ ಭರ್ತಿ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಹಾಗೂ ಮಧ್ಯ ಕರ್ನಾಟಕ ಭಾಗದ ಶಾಸಕರು ಪ್ರತ್ಯೇಕ ಸಭೆ ನಡೆಸಿ,ಸೋತವರಿಗೆ ಅವಕಾಶ ಕೊಡಬಾರದು ಎನ್ನುವ ಬೇಡಿಕೆ ಮಂಡಿಸಿದ್ದಾರೆ. ರಾಜೂಗೌಡ, ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ನೆಹರು ಓಲೆಕಾರ್ ಸೇರಿದಂತೆ ಮೂಲ ಬಿಜೆಪಿ ಶಾಸಕರು ಕೂಡ, ಸೋತವರಿಗೆ ಅವಕಾಶ ಕೊಟ್ಟರೆ ಗೆದ್ದವರು ಏನು ಮಾಡಬೇಕು ಎನ್ನುವ ದನಿ ಎತ್ತಿದ್ದಾರೆ.
ಇಷ್ಟಾದರೂ ನೂತನ ಸಚಿವರ ಪಟ್ಟಿಯಲ್ಲಿ ಸಿ.ಪಿ.ಯೋಗೀಶ್ವರ್ ಹೆಸರಿದೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಸಂಪುಟ ವಿಸ್ತರಣೆ ಮುನ್ನ ದಿನವಾದ ಇಂದು ಕೂಡ 7 ಮಿನಿಸ್ಟರ್ ಕ್ಯಾಟ್ರಸ್ನಲ್ಲಿರುವ ರೇಣುಕಾಚಾರ್ಯ ನಿವಾಸದಲ್ಲಿ, ಮತ್ತೆ ರಾಜೂಗೌಡ ನೇತೃತ್ವದಲ್ಲಿ ಸಭೆ ನಡೆಸಿ, ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿಯುವ ನಿರ್ಧಾರ ಮಾಡುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.