ಬೆಂಗಳೂರು: ಎಸಿಬಿ ಅಧಿಕಾರಿಗಳ ಜೊತೆ ಮಾತುಕತೆ ಮಾಡ್ತೀವಿ ಎಂದು ಹೇಳಿ ಬಿಡಿಎ ಇಂಜಿನಿಯರ್ ಗಳಿಗೆ 10 ಲಕ್ಷ ರೂ. ವಂಚಿಸಿದ್ದ ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಚೇತನ್, ಪ್ರವೀಣ್, ಮನೋಜ್ ಎಂದು ಗುರುತಿಸಲಾಗಿದೆ.
ಹೆಚ್ ಎಸ್ ಆರ್ ಲೇಔಟ್ ನ ಬಿಡಿಎ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಸಿಸ್ಟೆಂಟ್ ಎಂಜಿನಿಯರ್ ಅರವಿಂದ್ ಅವರ ದೂರಿನ ಮೇರಿಗೆ ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಸಿಬಿ ಅಧಿಕಾರಿಗಳ ಹೆಸರಲ್ಲಿ ವಂಚನೆ ಕುರಿತು ಮಾಹಿತಿ ನೀಡುತ್ತಿರುವುದು ಕಳೆದ ವರ್ಷ ನವೆಂಬರ್ 19ರಂದು ಬಿಡಿಎ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದ ಎಸಿಬಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು. ಈ ವೇಳೆ ಕಾಡುವೀಸನಹಳ್ಳಿಯಲ್ಲಿನ 1.8 ಎಕರೆ ಜಮೀನಿನ ಕಡತದ ವಿಚಾರವಾಗಿ ಅಸಿಸ್ಟೆಂಟ್ ಎಂಜಿನಿಯರ್ ಅರವಿಂದ್ ಭ್ರಷ್ಟಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೆ ಎಂಜಿನಿಯರ್ ಗಳಾದ ಮಹದೇವ್ ಗೌಡ ಹಾಗೂ ಗೋವಿಂದರಾಜು ಎಂಬ ಸಿಬ್ಬಂದಿ ವಿರುದ್ಧವೂ ಆರೋಪ ಕೇಳಿ ಬಂದಿತ್ತು.
ಇದರಿಂದ ಪಾರಾಗಲು ಯೋಜನೆ ಹಾಕಿದ್ದ ಮೂವರು ಇಂಜಿನಿಯರ್ ಗಳು ಬಿಡಿಎ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಎಂಬಾತನನ್ನ ಸಂಪರ್ಕಿಸಿದ್ದಾರೆ. ಆರೋಪಿ ವಿಜಯ್ ಕುಮಾರ್ ನನಗೆ ಎಸಿಬಿ ಅಧಿಕಾರಿಗಳು ತುಂಬಾ ಆಪ್ತರಾಗಿದ್ದಾರೆ. ಪ್ರಕರಣದಲ್ಲಿ ನಿಮ್ಮ ಹೆಸರು ಬರದಂತೆ ಮಾಡಲು 10 ಲಕ್ಷ ಕೊಡಿ ಎಂದು ಬೇಡಿಕೆ ಇಟ್ಟಿದ್ದ. ಅಂತೆಯೇ ಮೂವರು ಅಧಿಕಾರಿಗಳು ಸೇರಿ 10 ಲಕ್ಷ ರೂ. ಹಣ ಕೊಟ್ಟಿದ್ದರು. ಆದರೆ ಹಣ ಕೈಗೆ ಬಂದಿದ್ದೇ ತಡ, ಹಣದ ಸಮೇತ ಆರೋಪಿ ಎಸ್ಕೇಪ್ ಆಗಿದ್ದ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.
ಓದಿ :ಸರ್ಕಾರದ ದುಂದು ವೆಚ್ಚದ ಬಗ್ಗೆ ಪಕ್ಷಭೇದ ಮರೆತು ಚರ್ಚೆ: ನನಗೆ ಮನೆಯಿಲ್ಲ ಎಂದ ಜೆಡಿಎಸ್ ಶಾಸಕ