ಬೆಂಗಳೂರು :ಕೊರೊನಾ ಸೋಂಕಿನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವವರಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಕೋವಿಡ್ ನಿಂದ ಮೃತಪಟ್ಟ ಬಡ ಕುಟುಂಬದವರಿಗೆ 1 ಲಕ್ಷ ರೂ. ಪರಿಹಾರದ ಆದೇಶ ವಾಪಸ್ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50 ಸಾವಿರರೂ. ಗಳ ಪರಿಹಾರ ನೀಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆ 1 ಲಕ್ಷ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ 2021ರ ಸೆಪ್ಟೆಂಬರ್ 23ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಈ ಸಂಬಂಧ ಇಂದು ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯದ 2021 ಸೆಪ್ಟೆಂಬರ್ 25ರ ನಿರ್ದೇಶನದಂತೆ ಕೋವಿಡ್-19 ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50 ಸಾವಿರ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ.
ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ಚೆಕ್ ಮೂಲಕ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆಪ್ಟೆಂಬರ್ 23ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ ಎಂದು ಇಂದಿನ ಆದೇಶದಲ್ಲಿ ತಿಳಿಸಲಾಗಿದೆ.
ಮೃತರು ಕೋವಿಡ್ ಬಾಧಿತರು ಎಂದು ಸಾಬೀತಾಗಿರಬೇಕು:
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೆಪ್ಟೆಂಬರ್ 11ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಭರಿಸಬೇಕು. ಜೂನ್ 30ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ಮಾರ್ಗಸೂಚಿ ರೂಪಿಸಿತ್ತು.
ಕೋವಿಡ್ ಸೋಂಕು ದೃಢವಾದ ಒಂದು ತಿಂಗಳ ಒಳಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳು ಕೂಡ 50 ಸಾವಿರ ರೂ. ಪರಿಹಾರ ಹಣ ಪಡೆಯಲು ಅರ್ಹತೆ ಹೊಂದಿರುತ್ತವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಮೃತರು ಕೋವಿಡ್ ಬಾಧಿತರು ಎಂದು ಸಾಬೀತಾಗಿರಬೇಕು. ಆಗ ಅವರ ಕುಟುಂಬ ಕೂಡ ಪರಿಹಾರಕ್ಕೆ ಅರ್ಹವಾಗಿರುತ್ತದೆ ಎಂದು ಕೋರ್ಟ್ ಹೇಳಿತ್ತು. ಈ ಕುರಿತು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿರುವ ಗೃಹ ಸಚಿವಾಲಯ, ಈ ನಿಟ್ಟಿನಲ್ಲಿ ಅಗತ್ಯ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೇಳಿತ್ತು.
ಕೋವಿಡ್-19ನಿಂದ ಮೃತಪಟ್ಟವರ ಮರಣ ಪತ್ರದಲ್ಲಿ 'ಕೋವಿಡ್ ಕಾರಣದಿಂದ ಆತ್ಮಹತ್ಯೆ' ಎಂಬ ಅಂಶವನ್ನು ನಮೂದು ಮಾಡದೇ ಇರುವ ಕುರಿತು ಪುನರ್ ವಿಮರ್ಶೆ ಮಾಡಬೇಕು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡಲು 'ಆತ್ಮಹತ್ಯೆ' ಎಂಬುದರ ಉಲ್ಲೇಖ ಅತಿಮುಖ್ಯ ಎಂದು ಸೆಪ್ಟೆಂಬರ್ 13ರಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೇಳಿತ್ತು. ಕೋರ್ಟ್ ಎತ್ತಿರುವ ಕಳಕಳಿ ಕುರಿತು ಪುನರ್‌ವಿಮರ್ಶೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಕೊರೊನಾ ಸೋಂಕಿಗೆ ತುತ್ತಾದ ವೇಳೆಯೇ, ವಿಷ ಪದಾರ್ಥ ಸೇವನೆ, ಆತ್ಮಹತ್ಯೆ, ಕೊಲೆ ಅಥವಾ ಆತ್ಮಹತ್ಯೆಯಿಂದ ಸಂಭವಿಸಿದ ಸಾವುಗಳನ್ನು ಕೋವಿಡ್‌ನಿಂದ ಸಂಭವಿಸಿದ ಸಾವುಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಐಸಿಎಂಆರ್ ಇದಕ್ಕೂ ಮೊದಲು ಜಂಟಿಯಾಗಿ ಮಾರ್ಗಸೂಚಿ ಹೊರಡಿಸಿತ್ತು.