ಬೆಂಗಳೂರು:ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಖಂಡಿಸಿರುವ ಹೈಕೋರ್ಟ್, ಮಂಡಳಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
ನಗರದ ‘ಎಸಿವಿ ಏರೋ ಇಂಡಸ್ಟ್ರೀಸ್’ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ, ಅರ್ಜಿದಾರರಿಗೆ ಕ್ರಯಪತ್ರ ಮಾಡಿಕೊಡಲು ವಿಳಂಬ ಮಾಡಿರುವ ಕೆಐಎಡಿಬಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, ಇತರ ಭೂಸ್ವಾಧೀನ ಪ್ರಕರಣಗಳಲ್ಲಿ ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಭೂಮಿ ಬಿಟ್ಟುಕೊಟ್ಟು ಕ್ರಯಪತ್ರ ಮಾಡಿಕೊಟ್ಟಿರುವ ಕೆಐಎಡಿಬಿ, ಅರ್ಜಿದಾರರಿಗೆ ಕ್ರಯಪತ್ರ ಮಾಡಿಕೊಡದೆ ಸತಾಯಿಸಿದೆ. ಮಂಡಳಿಯ ಈ ವರ್ತನೆ ತಾರತಮ್ಯದಿಂದ ಕೂಡಿದೆ. ಆದ್ದರಿಂದ ಮಂಡಳಿ ಕೂಡಲೇ ಅರ್ಜಿದಾರರಿಗೆ ಮಾರಾಟ ಕ್ರಯಪತ್ರ ಮಾಡಿಕೊಡಬೇಕು. ಜೊತೆಗೆ ಲೋಪವೆಸಗಿದ ಕಾರಣಕ್ಕೆ ಅರ್ಜಿದಾರರಿಗೆ 1 ಲಕ್ಷ ರೂ. ಪಾವತಿಸಬೇಕು ಎಂದು ಆದೇಶಿಸಿದೆ. ಹಾಗೆಯೇ 2013ರ ಡಿ.31ರಂದು ಕೆಐಎಡಿಬಿ ಅರ್ಜಿದಾರರೊಂದಿಗೆ ಮಾಡಿಕೊಂಡಿದ್ದ ಲೀಸ್ ಕಮ್ ಸೇಲ್ ಒಪ್ಪಂದವನ್ನು ರದ್ದುಪಡಿಸಿದೆ.