ಬೆಂಗಳೂರು:ಲಸಿಕಾ ಮೇಳದ ಮೂಲಕ ನಗರದ ಪಾಲಿಕೆ ವ್ಯಾಪ್ತಿಯಲ್ಲಿ ಶುಕ್ರವಾರ ಒಂದೇ ದಿನ 1.64 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಬಿಬಿಎಂಪಿ ವ್ಯಾಾಪ್ತಿಯ ಎಲ್ಲಾ ಎಂಟು ವಲಯಗಳಲ್ಲಿ ಕೊರೊನಾ ಲಸಿಕಾ ಮೇಳದ ಪ್ರಯುಕ್ತ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲು ಪಾಲಿಕೆಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕೋವಿಡ್ ನಿಯಮಗಳ ಪಾಲನೆ ಮೂಲಕ 1.25 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಅದರಂತೆ, 1,64,787 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಡಿ.ರಂದೀಪ್ ಹೇಳಿದ್ದಾರೆ.
ನಗರದ 8 ವಲಯಗಳಲ್ಲಿಯೂ ಮುಂಚಿತವಾಗಿ ಸ್ಥಳೀಯರಿಗೆ ಲಸಿಕಾ ಮೇಳದ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದಕ್ಕಾಗಿ ಆಯಾ ವಾರ್ಡ್ಗಳಲ್ಲಿ ಆರೋಗ್ಯ ವೈದ್ಯಾಧಿಕಾರಿಗಳು ಪ್ಲಾನ್ ಮಾಡಿಕೊಂಡು ಲಸಿಕಾ ಮೇಳವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಲಸಿಕಾ ಮೇಳದಲ್ಲಿ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಒಂದೇ ದಿನ 1.64 ಲಕ್ಷ ಮಂದಿಗೆ ಲಸಿಕೆ...!
ದೇಶದಲ್ಲಿ ಶುಕ್ರವಾರ ಒಂದೇ ದಿನ 1 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ. ಹಾಗೆಯೇ ಬೆಂಗಳೂರಲ್ಲಿ ಒಂದೇ ದಿನ 1.65 ಲಕ್ಷ ಮಂದಿಗೆ ಲಸಿಕೆ ವಿತರಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್, ರೆಸ್ಟೋರೆಂಟ್ಸ್, ಕಚೇರಿಗಳು ಹಾಗೂ ಹೆಚ್ಚು ಜನಸೇರುವ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಇದರಿಂದ ನಗರ ಸುರಕ್ಷಿತವಾಗಿರುವುದರ ಜೊತೆಗೆ ಎಲ್ಲರೂ ನಿರ್ಭಯದಿಂದ ಇರಬಹುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ನಗರದ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾರಿ ಸಂಸ್ಥೆಗಳು, ಹೋಟೆಲ್ ಅಸೋಸಿಯೇಷನ್ ಸೇರಿದಂತೆ ಇನ್ನಿತರೆ ಸಂಘಗಳ ಜೊತೆ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತ ಗೌರವ್ ಗುಪ್ತಾ, ನಗರದಲ್ಲಿ ಶೇ.74 ರಷ್ಟು ಮೊದಲನೇ ಡೋಸ್ ಹಾಗೂ ಶೇ.26 ರಷ್ಟು ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದು, ಎಲ್ಲರೂ ಲಸಿಕೆಯನ್ನು ಪಡೆದು ಕೋವಿಡ್ ಸೋಂಕನ್ನು ನಿಯಂತ್ರಿಸಬೇಕು ಎಂದರು.
(ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ: ಹೊಸ ದಾಖಲೆ ಬರೆದ ಭಾರತ)