ಬಳ್ಳಾರಿ: ತಾಲೂಕಿನ ಕಂಪ್ಲಿ ಕೋಟೆಯ ಸಮೀಪದ ಗುರುವಾರ ಮಹಿಳೆಯೊಬ್ಬರ ಶವವನ್ನು ಜನರು ತೆಪ್ಪದ ಮೂಲಕ ಸಾಗಿಸಿದ್ದಾರೆ. ಗ್ರಾಮದ ದಮ್ಮೂರು ಪಕ್ಕೀರಮ್ಮ(72) ಎಂಬುವವರು ನಿಧನರಾಗಿದ್ದರು. ಕಂಪ್ಲಿ ಕೋಟೆಯ ನದಿ ಪಾತ್ರದ ಬಳಿಯ ಸ್ಮಶಾನಕ್ಕೆ ತೆರಳುವ ರಸ್ತೆ ಜಲಾವೃತವಾಗಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.
ಪಾರ್ಥಿವ ಶರೀರವನ್ನು ತೆಪ್ಪದಲ್ಲಿಟ್ಟುಕೊಂಡು ಸಂಬಂಧಿಗಳು ಹಾಗೂ ಪುರೋಹಿತರು ಸ್ಮಶಾನಕ್ಕೆ ತೆರಳಿದ್ದಾರೆ. ಪ್ರತಿ ಬಾರಿ ತುಂಗಭದ್ರಾ ನದಿಗೆ ನೀರು ಬಂದಾಗಲೆಲ್ಲ ಸ್ಮಶಾನಕ್ಕೆ ಹೋಗುವ ರಸ್ತೆ ನೀರಿನಲ್ಲಿ ಮುಳುಗುತ್ತದೆ. ಇಲ್ಲಿನ ಆರ್ಯವೈಶ್ಯ ಸಮಾಜ, ಬ್ರಾಹ್ಮಣ, ತೊಗಟವೀರ ಕ್ಷತ್ರಿಯ, ಜೈನ ಮತ್ತು ಗಂಗಾಮತ ಸಮಾಜ ಸೇರಿದಂತೆ ಇತರೆ ಸಮಾಜದವರು ಶವಸಂಸ್ಕಾರಕ್ಕೆ ತೆಪ್ಪದಲ್ಲಿಯೇ ತೆರಳುತ್ತಾರೆ.