ಹೊಸಪೇಟೆ(ಬಳ್ಳಾರಿ):ನಗರದ ಅನಂತಶಯನಗುಡಿ ರೈಲ್ವೆ ಗೇಟ್ ಬಳಿ ಹಲವು ವರ್ಷಗಳ ಹಿಂದೆಯೇ ಮೇಲ್ಸೆಸೇತುವೆ ನಿರ್ಮಾಣವಾಗಬೇಕಿತ್ತು. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಹೊಸಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ನಾಗನಗೌಡ ಅವರ ಕಾಲಘಟ್ಟದಲ್ಲಿ ಮೇಲ್ಸೆಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಬಳಿಕ ನಾಗನಗೌಡರೇ ರೈತರ ಕಬ್ಬಿನ ಬಂಡಿಗಳು ಹೊಸಪೇಟೆ ಐಎಸ್ಆರ್ ಸಕ್ಕರೆ ಕಾರ್ಖಾನೆಗೆ ಬರಲು ತೊಂದರೆಯಾಗುತ್ತದೆ ಎಂದು ಮೇಲ್ಸೆಸೇತುವೆ ನಿರ್ಮಾಣ ಕಾರ್ಯವನ್ನು ತಡೆದಿದ್ದರು. ತದನಂತರ ಐಎಸ್ಆರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತ್ತು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಮಂತ್ರಿಯಾಗಿದ್ದಾಗ ಬಸವಗೌಡ ಪಾಟೀಲ್ ಅವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರು. ಈ ವೇಳೆ ಎರಡನೇ ಬಾರಿಗೆ ಮೇಲ್ಸೆಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ನಂತರ ಕಾಮಗಾರಿಯನ್ನು ಆರಂಭ ಮಾಡದೇ ನಿರ್ಲಕ್ಷ್ಯ ಮಾಡಲಾಯಿತು.
ಇದಾದ ಹಲವು ವರ್ಷಗಳ ನಂತರ ಅಂದರೆ ಜೂನ್ 2019ರಲ್ಲಿ ಮೇಲ್ಸೆಸೇತುವೆ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಎರಡು ಕೋಟಿ ರೂ. ಪೂರ್ವಭಾವಿ ಕಾಮಗಾರಿ ಅನುದಾನ ಬಿಡುಗಡೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಮೇಲ್ಸೆಸೇತುವೆಗೆ ಬೇಕಾದ ಸ್ಥಳವನ್ನು ಸ್ವಾಧೀನ ಮಾಡಿ, ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡುವುದರ ಜೊತೆಗೆ ಯೋಜನೆಗೆ ಬೇಕಾದಂತಹ ಶೇ. 50ರಷ್ಟು ಅನುದಾನವನ್ನು ನೀಡಬೇಕಿತ್ತು. ಆದರೆ, ಇದ್ಯಾವ ಕೆಲಸವನ್ನು ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆ ಮಾಡಿಲ್ಲ. ಹೀಗಾಗಿ ಮೇಲ್ಸೆಸೇತುವೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಹಿಂದಿನ ಜಿಲ್ಲಾಧಿಕಾರಿ ಮೇಲ್ಸೆಸೇತುವೆ ನಿರ್ಮಾಣ ಮಾಡುವ ಎರಡು ಬದಿಯ ನಿವಾಸಿಗಳಿಗೆ ಮನೆ ತೆರವು ಮಾಡುವಂತೆ ನೋಟಿಸ್ ನೀಡಿದ್ದರು. ನಿವಾಸಿಗಳು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದರೆ ಮಾತ್ರ ಮನೆ ತೆರವು ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ, ಇಲ್ಲಿವರೆಗೂ ತೆರವು ಕಾರ್ಯವಾಗಿಲ್ಲ. ಜಿಲ್ಲಾಧಿಕಾರಿ ಕೇವಲ ನೋಟಿಸ್ ನೀಡಿ, ಸುಮ್ಮನಾಗಿದ್ದಾರೆ.