ಬಳ್ಳಾರಿ: ಲೋಕಸಭಾ ಉಪಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಗೆಲುವಿಗೆ ಮಂಗಳವಾರ ಶುಭ ಸೂಚಕವಾಗಿದ್ದು, ಏಪ್ರಿಲ್ 2ರಂದು ಮಂಗಳವಾರವೇ ಮತ್ತೊಮ್ಮೆ ಉಗ್ರಪ್ಪನವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ ತಿಳಿಸಿದ್ದಾರೆ.
ಜಿಲ್ಲೆಯ ಸಂಡೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ ನಿಮಿತ್ತ ನಡೆದ ಜಿಲ್ಲಾ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಾಗಿತ್ತು. ಮಂಗಳವಾರವೇ ಅಚ್ಚರಿಯ ಫಲಿತಾಂಶ ದೊರೆಯಿತು. ಹೀಗಾಗಿ, ಏಪ್ರಿಲ್ 2ರಂದು ಮಂಗಳವಾರವೇ ನಾಮಪತ್ರ ಸಲ್ಲಿಸಲಾಗುವುದು. ಆದಿನ ನಾನೂ ಕೂಡ ಬರುವೆ. ಆ ಬಳಿಕ ಜಿಲ್ಲೆಯಲ್ಲೇ ಇದ್ದುಕೊಂಡು ಉಗ್ರಪ್ಪನವರ ಪರವಾಗಿಯೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವೆ ಎಂದರು.
ಹಾಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ದೇವೇಂದ್ರಪ್ಪ ಅವರು ಕಳೆದ ಚುನಾವಣೆಯಲ್ಲಿ ನನ್ನ ಬಳಿ ಟಿಕೆಟ್ ಕೇಳಿದ್ದರು. ನಾನು ಅವರ ಓದು ಕೇಳಿ ನಿರಾಕರಿಸಿದ್ದೆ. ಈಗ ಶ್ರೀರಾಮುಲು ಅವರ ಗಾಳಕ್ಕೆ ಬಿದ್ದಿದ್ದಾರೆ ಎಂದ ಸಚಿವ ಡಿ.ಕೆ.ಶಿವಕುಮಾರ್, ದೇವೇಂದ್ರಪ್ಪ ಅವರನ್ನು ಗಾಳಕ್ಕೆ ಬಿದ್ದ ಮೀನಿಗೆ ಹೋಲಿಸಿದ್ದಾರೆ.ದೇವೆಂದ್ರಪ್ಪನವರಿಗೆ ಪಾರ್ಲಿಮೆಂಟ್ನಲ್ಲಿ ಮಾತಾಡೋಕೆ ಆಗುತ್ತಾ? ಇದಕ್ಕೆಲ್ಲ ಶಾಸಕರಾದ ಶ್ರೀ ರಾಮುಲು, ಯಡಿಯೂರಪ್ಪ ಅವರೇ ಉತ್ತರಿಸಬೇಕು ಎಂದು ಟೀಕಿಸಿದರು.
ದೇವೇಂದ್ರಪ್ಪ ಅಭ್ಯರ್ಥಿ ಆಗುತ್ತಿದ್ದಂತೆ ಅಬಕಾರಿ ಅಧಿಕಾರಿಗಳಿಗೆ ಹಣ ನೀಡುವಂತೆ ಕರೆ ಬರುತ್ತಿದೆಯಂತೆ.ಆದರೆ ಬಳ್ಳಾರಿಯಲ್ಲಿ ಮತ್ತೊಮ್ಮೆ ವಸೂಲಿ ರಾಜಕಾರಣ ಮಾಡಲು ಬಿಡುವುದಿಲ್ಲ. ಇಲ್ಲಿನ ಪರಿಸರ ನಂಗೆ ತುಂಬ ಇಷ್ಟ. ಬಳ್ಳಾರಿ ರಿಸರ್ವೇಶನ್ ಜನರಲ್ ಆಗಿದ್ದರೆ ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ. ಮುಂದೆ ಒಮ್ಮೆ ಬದಲಾವಣೆಯಾದರೆ, ನನಗೂ ಆಯಸ್ಸು ಇದ್ದರೆ ಖಂಡಿತ ಇಲ್ಲಿಂದಲೇ ನಿಲ್ಲುತ್ತೇನೆ. ನೀವೆಲ್ಲ ನನ್ನನ್ನು ಗೆಲ್ಲಿಸಬೇಕು ಎಂದರು.