ಬಳ್ಳಾರಿ :ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ತೆರೆಯಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್ ಲಾಡ್ ಅವರು ಈ ಕಚೇರಿಯನ್ನ ಆರಂಭಿಸಿದ್ದರು. ಆ ಬಳಿಕ ಡಿ ಕೆ ಶಿವಕುಮಾರ ಜಿಲ್ಲೆಯ ಉಸ್ತುವಾರಿಯನ್ನ ವಹಿಸಿಕೊಂಡಿದ್ದರು.
ನಂತರ ಹಾಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಜಿಲ್ಲೆಯ ಉಸ್ತುವಾರಿಯಾಗಿದ್ದರು. ಆದ್ರೆ, ಮಾಜಿ ಸಚಿವ ಸಂತೋಷ ಎಸ್ ಲಾಡ್ ಕಚೇರಿಯೊಳಗೆ ಪ್ರವೇಶಿಸಿದ್ದು ಬಿಟ್ಟರೆ ಬೇರೆ ಯಾರೊಬ್ಬ ಉಸ್ತುವಾರಿ ಸಚಿವರೂ ಕೂಡ ಇತ್ತ ಕಡೆ ಎಡತಾಕಲಿಲ್ಲ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ತೆರೆಯಲು ಮಹೂರ್ತ ಫಿಕ್ಸ್.. ವಿಶೇಷ ಅಂದ್ರೆ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಇರೋದೇ ಗಮನಕ್ಕೆ ಇಲ್ಲ. ಅದು ಮಾಧ್ಯಮದವರು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಇರೋದರ ಕುರಿತು ಗಮನ ಸೆಳೆದಾಗ, ಇಲ್ಲಿ ಎಲ್ಲಿ ಇದೆ.
ಉಸ್ತುವಾರಿ ಸಚಿವರ ಕಚೇರಿ ಇದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಅಲ್ಲದೆ, ಫೆಬ್ರವರಿ 5ರಂದು ನಾನು ಜಿಲ್ಲಾ ಕೇಂದ್ರಕ್ಕೆ ಬಂದಾಗ ಅದನ್ನ ತೆರೆದೇ ಬಿಡೋಣ ಎನ್ನುತ್ತಲೇ ಮುಹೂರ್ತ ಫಿಕ್ಸ್ ಮಾಡಿದರು.
ಉಸ್ತುವಾರಿ ಸಚಿವರ ಕಚೇರಿಯತ್ತ ಸುಳಿಯದ ಸಚಿದ್ವಯರು : ಮಾಜಿ ಸಚಿವ ಸಂತೋಷ ಎಸ್.ಲಾಡ್ ಬಿಟ್ಟರೆ, ಆ ಬಳಿಕ ಬಂದಂತಹ ಡಿಕೆಶಿ ಹಾಗೂ ಹಾಲಿ ಡಿಸಿಎಂ ಸವದಿಯವರು ಈ ಕಚೇರಿಯತ್ತ ಸುಳಿಯಲೇ ಇಲ್ಲ. ಸದ್ಯ ಜಿಲ್ಲಾ ಉಸ್ತುವಾರಿಯಾಗಿರುವ ಆನಂದ ಸಿಂಗ್ ಏನ್ ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.