ಬಳ್ಳಾರಿ: ರಂಗಭೂಮಿ ಎಂಬುದು ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ. ಹಲವು ಕಷ್ಟ ಕಾರ್ಪಣ್ಯಗಳ ಸುಳಿಯಲ್ಲಿ ರಂಗಭೂಮಿ ಸಿಲುಕಿ ಇಂದಿಗೂ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡಿದೆ. ಇಂತಹ ರಂಗಭೂಮಿಗೆ ಮಹಿಳೆಯರ ಕೊಡುಗೆ ಅಪಾರ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟಿದ್ದಾರೆ.
ಹಂದ್ಯಾಳು ಮಹಾದೇವತಾತ ಕಲಾಸಂಘದಿಂದ ಬಳ್ಳಾರಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿಂದು ಆಯೋಜಿಸಿದ್ದ 'ರಂಗ ಭೂಮಿಗೆ ಮಹಿಳೆಯರ ಕೊಡುಗೆ' ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿಯವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಅನೇಕ ಸವಾಲುಗಳ ನಡುವೆಯೇ ಇಂದಿನ ಆಧುನಿಕ ಯುಗದಲ್ಲೂ ರಂಗಭೂಮಿ ತನ್ನ ಘನತೆಯನ್ನ ಉಳಿಸಿಕೊಂಡಿದೆ ಎಂದು ಹೇಳಿದರು.
'ರಂಗ ಭೂಮಿಗೆ ಮಹಿಳೆಯರ ಕೊಡುಗೆ' ವಿಚಾರ ಸಂಕಿರಣ ಟಿವಿ, ಸಾಮಾಜಿಕ ಮಾಧ್ಯಮದ ನಡುವೆ ರಂಗಭೂವಿ ಕುಗ್ಗಿದೆ
ಈ ಹಿಂದೆ ರಂಗಭೂಮಿಗೆ ಸಾಕಷ್ಟು ಮಾನ್ಯತೆ ಇತ್ತು. ಆದರೆ ಯಾವಾಗ ಟಿವಿ, ಸಾಮಾಜಿಕ ಮಾಧ್ಯಮಗಳು ಪ್ರಬಲವಾದವೋ ಅಂದಿನಿಂದ ರಂಗಭೂಮಿಯ ಅಸ್ತಿತ್ವಕ್ಕೆ ಧಕ್ಕೆ ಬಂತಲ್ಲಪ್ಪ ಅಂತಾ ಅನಿಸಿದ್ದು ಸುಳ್ಳಲ್ಲ. ಅನೇಕ ಸವಾಲುಗಳ ನಡುವೆಯೂ ಕೂಡ ರಂಗಭೂಮಿ ಇಲ್ಲಿಯವರೆಗೂ ಬೆಳೆದು ಬಂದಿದೆ. ಅನೇಕ ಮಹಿಳೆಯರು ರಂಗಭೂಮಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ವೀಣಾ ಆದೋನಿ ಸೇರಿ ನಾನಾ ಕಲಾವಿದರು ರಂಗಭೂಮಿಗೆ ಅದಮ್ಯ ಕೊಡುಗೆ ನೀಡಿದ್ದಾರೆ ಎಂದರು.
ವಿದ್ಯಾರ್ಥಿಗಳು ರಂಗಭೂಮಿಯತ್ತ ಹೆಜ್ಜೆ ಹಾಕಬೇಕು
ವಿದ್ಯಾರ್ಥಿಗಳು ಕೂಡ ರಂಗಭೂಮಿಯತ್ತ ಹೆಜ್ಜೆ ಇಡಬೇಕು. ಸಾಮಾಜಿಕ, ಪೌರಾಣಿಕ ನಾಟಕಗಳನ್ನು ನೋಡಬೇಕು. ಅಂದಾಗ ಮಾತ್ರ ಈ ರಂಗಭೂಮಿ ಅಂದರೆ ಏನೆಂಬುದು ಅರ್ಥವಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳು ಪ್ರಮುಖವಾಗಿ ಓದುವುದನ್ನ ಮೈಗೂಡಿಸಿಕೊಳ್ಳಿ. ಮೊಬೈಲ್ನಿಂದ ದೂರವಿರಿ. ಪಾಲಕರು ಕೂಡ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿ. ಇದರಿಂದ ಸಂಸ್ಕೃತಿ, ಸಂಬಂಧ ಉಳಿಯುತ್ತದೆ. ಜತೆಗೆ ಮಕ್ಕಳು ಕೂಡ ಕನ್ನಡವನ್ನು ಉಳಿಸಬೇಕು. ಬಹುಮುಖ್ಯವಾಗಿ ಜೀವನದಲ್ಲಿ ಸಾಧನೆ ಮಾಡುವ ಛಲ ರೂಢಿಸಿಕೊಳ್ಳಬೇಕು ಎಂದರು.
ರಂಗಭೂಮಿ ಕಲೆ ನನಗೆ ಲಕ್ಷ ಲಕ್ಷ ಮಕ್ಕಳನ್ನು ನೀಡಿದೆ
ಪದ್ಮಶ್ರೀ ಪ್ರಶಸ್ತಿ ನನಗೆ ಬಂದಿಲ್ಲ, ಇಡೀ ಬಳ್ಳಾರಿ ಜಿಲ್ಲೆಗೆ ಬಂದಿರುವಂತದ್ದು. ನಾನು ಮಂಗಳಮುಖಿಯಾಗಿರೋದರಿಂದ ನನಗೆ ಮಕ್ಕಳಿಲ್ಲ. ಆದರೆ ರಂಗಭೂಮಿ ಕಲೆ ನನಗೆ ಲಕ್ಷ ಲಕ್ಷ ಮಕ್ಕಳನ್ನು ನೀಡಿದೆ. ಇದಕ್ಕಿಂತ ಖುಷಿ ಸಂಗತಿ ನನಗೆ ಮತ್ತೊಂದಿಲ್ಲ ಎಂದು ತಮ್ಮ ಜೀವನದ ಅನುಭವ ಹಂಚಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ರಂಗಣ್ಣನವರ್, ಹಿರಿಯ ರಂಗಭೂಮಿ ಕಲಾವಿದರಾದ ವೀಣಾಕುಮಾರಿ, ಉಮಾರಾಣಿ ಇಲಕಲ್, ಹಿರಿಯ ಉಪನ್ಯಾಸಕರಾದ ಶಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಾಂದ ಬಾಷಾ, ಯು.ಆರ್.ಶ್ರೀನಿವಾಸಮೂರ್ತಿ, ಎನ್.ಎಸ್.ಸಿದ್ದೇಶ್ವರಿ, ಸುಜಾತಾ, ಸನ್ಮಾರ್ಗ ಗೆಳೆಯರ ಬಳಗದ ಕಪ್ಪಗಲ್ಲು ಚಂದ್ರಶೇಖರ ಆಚಾರ್ಯ, ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಇದ್ದರು.