ಕರ್ನಾಟಕ

karnataka

ETV Bharat / city

ಬಳ್ಳಾರಿಯ ಬಯಲು ರಂಗಮಂದಿರಕ್ಕೆ ನಾ. ಸುಭದ್ರಮ್ಮ ಮನ್ಸೂರ್ ಹೆಸರು - Bellary ranga mandira

ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಚಯ ಬಯಲು ರಂಗಮಂದಿರಕ್ಕೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರನ್ನು ಬಳ್ಳಾರಿ ನಗರದ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ನಾಮಕರಣ ಮಾಡಿದರು.

Bellary ranga mandira
ಬಳ್ಳಾರಿಯ ಬಯಲು ರಂಗಮಂದಿರ

By

Published : Jul 17, 2021, 8:52 AM IST

ಬಳ್ಳಾರಿ: ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿರುವ ಬಯಲು ರಂಗಮಂದಿರಕ್ಕೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರನ್ನು ನಾಮಕರಣ ಮಾಡಲಾಯಿತು. ಈ ವೇಳೆ ಸುಭದ್ರಮ್ಮ ಅವರು ಬಳ್ಳಾರಿ ಜಿಲ್ಲೆಗೆ ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್​ ರೆಡ್ಡಿ ಅವರು ನಾಡೋಜ ಸುಭದ್ರಮ್ಮ ಮನ್ಸೂರ್ ಹೆಸರನ್ನು ನಾಮಕರಣ ಮಾಡಿದರು. ಬಳಿಕ‌ ಮಾತನಾಡಿದ ಅವರು, ಹಿರಿಯ ಕಲಾವಿದರಾದ ನಾಡೋಜ ಸುಭದ್ರಮ್ಮ ಅವರು ಬಳ್ಳಾರಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕಲೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ನಗರದಲ್ಲಿ ಜೋಳದರಾಶಿ ದೊಡ್ಡನಗೌಡರು, ರಂಜಾನ್ ಸಾಬ್, ಬಹದ್ದೂರ್ ಶೇಷಗಿರಿ ಅವರ ಪುತ್ಥಳಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನಗರದ 21 ಪಾರ್ಕ್​ಗಳಿಗೆ ಕಲಾವಿದರ ಹೆಸರಿಡಲು ನಿಶ್ಚಯಿಸಲಾಗಿದೆ. ನಾಟಕ, ಜಾನಪದ ಗೀತೆಗಳು, ಹಗಲುವೇಷ, ಸಂಗೀತ, ಸಾಹಿತ್ಯ ಒಳಗೊಂಡಂತೆ ಅಪಾರ ಸಂಸ್ಕೃತಿ ಹೊಂದಿದ ನಾಡು ನಮ್ಮ ರಾಜ್ಯ ಎಂದು ಬಣ್ಣಿಸಿದರು.

ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಮಾತನಾಡಿ‌, ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರಕ್ಕೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡಿರುವುದು ನಮ್ಮ ಜಿಲ್ಲೆಯ ಕಲಾವಿದರಿಗೆ ಸಲ್ಲುವ ಗೌರವ. ಅವರ ಶ್ರಮ‌, ಭಕ್ತಿ, ನಯ, ನುಡಿ ಮತ್ತು ವಾಕ್ ಚಾತುರ್ಯ ಅವರ ಬೆಳವಣಿಗೆಗೆ ಕಾರಣ. ನಾಟಕದಲ್ಲಿ ಎಲ್ಲರಿಗೂ ಸಮಾನವಾದ ಪ್ರಾಮುಖ್ಯತೆ ಇದೆ. ನಾವು ಮಾಡುವ ಕೆಲಸದಲ್ಲಿ ಭಕ್ತಿ ಮತ್ತು ಶ್ರದ್ಧೆ ಇದ್ದರೆ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಕಲೆಯ ಬಗ್ಗೆ ಇಂದಿನ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ.ರಂಗಣ್ಣನವರ್, ಈರಮ್ಮ, ರಮೇಶಗೌಡ ಪಾಟೀಲ, ಸುಜಾತಮ್ಮ, ಪುರುಷೋತ್ತಮ ಹಂದ್ಯಾಳ್, ಸುಭದ್ರಮ್ಮ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಟಿ.ಕೆ. ಗಂಗಾಧರ್ ಪತ್ತಾರ್ ಅವರ ಅಭಿವ್ಯಕ್ತಿ ವ್ಯಕ್ತಿ ಚಿತ್ರಣ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ABOUT THE AUTHOR

...view details