ಬಳ್ಳಾರಿ/ಮಂಗಳೂರು :ರಾಜ್ಯದಲ್ಲಿ ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜುವರೆಗೂ ಹಿಜಾಬ್ ಹಾಗೂ ಬುರ್ಕಾ ಧರಿಸಿ ಬಂದರೂ, ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್, ಬುರ್ಕಾ ತೆಗೆದಿಟ್ಟು ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದಾರೆ. ಯಾವುದೇ ತಗಾದೆ ಎತ್ತದೆ ಹಿಜಾಬ್ ತೆರೆದಿಟ್ಟು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ಬಳ್ಳಾರಿಯಲ್ಲಿ ಹಿಜಾಬ್ ತೆಗೆದಿರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಯರು.. ಯಾವುದೇ ಧರ್ಮದ ಸಂಕೇತದ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಸರ್ಕಾರದ ಆದೇಶವಿದೆ. ಕಾಲೇಜಿನ ಸಿಡಿಸಿ ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸಿ ಬರುವಂತೆ ಸರ್ಕಾರ ಆದೇಶ ಮಾಡಿದೆ. ಅವಳಿ ಜಿಲ್ಲೆಯಲ್ಲಿ ಒಟ್ಟು 34 ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಲಾಗಿದೆ. ಬಳ್ಳಾರಿಯಲ್ಲಿ 16 ಪರೀಕ್ಷಾ ಕೇಂದ್ರಗಳು ಹಾಗೂ ವಿಜಯನಗರ ಜಿಲ್ಲೆಯಲ್ಲಿ 18 ಕೇಂದ್ರಗಳನ್ನು ತೆರೆಯಲಾಗಿದೆ.
ಎರಡೂ ಜಿಲ್ಲೆಯಿಂದ 30647 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 26,087 ಫ್ರೆಶರ್, 1376 ಖಾಸಗಿ, 3184 ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 15971 ವಿದ್ಯಾರ್ಥಿಗಳು ಹಾಗೂ 14676 ವಿದ್ಯಾರ್ಥಿನಿಯರು ಪರೀಕ್ಷೆಗೆ ಎನ್ರೋಲ್ ಮಾಡಿಸಿದ್ದಾರೆ.
ಮಂಗಳೂರಿನ ರಥಬೀದಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಮೂವರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಆಗಮಿಸಿದ್ದರು. ಆದರೆ, ಪೊಲೀಸರು ಅವರನ್ನು ಪ್ರವೇಶ ದ್ವಾರದ ಬಳಿಯೇ ತಡೆದು ಹಿಜಾಬ್ ತೆಗೆದು ಬರುವಂತೆ ಸೂಚಿಸಿದ್ದಾರೆ. ಅದರಂತೆ ಹಿಜಾಬ್ ಅನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿಯರು ಪ್ರವೇಶಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲೂ ಗೊಂದಲದ ವಾತಾವರಣ ಸೃಷ್ಟಿಯಾಗಿಲ್ಲ.
ಮಂಗಳೂರಿನಲ್ಲಿ ಹಿಜಾಬ್ ತೆಗೆದಿರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಯರು.. ರಾಜ್ಯಾದ್ಯಂತ ಇಂದಿನಿಂದ ಪಿಯುಸಿ ಪರೀಕ್ಷೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 51 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 31,308 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಹಿಜಾಬ್ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಪರೀಕ್ಷೆ ಬರೆಯುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಮೇ 18ರವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ.
ಇದನ್ನೂ ಓದಿ:2nd PUC ಪರೀಕ್ಷೆ ಬರೆಯಲು ಆಗಮಿಸಿದ ಅಭಿಷೇಕ ಹಿರೇಮಠ್ : ಪೊಲೀಸರು ಹೈಅಲರ್ಟ್