ಹೊಸಪೇಟೆ: ಪಂಚಮಸಾಲಿ ಮೀಸಲಾತಿ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಕೂಡಲೇ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಗರದ ಗುಂಡಾ ಸಸ್ಯೋದ್ಯಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತಗಳು ಏನೇ ಇರಲಿ, ಸಮುದಾಯಕ್ಕೆ ಮೀಸಲಾತಿಯನ್ನು ನೀಡಲಿ. ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು ನಮ್ಮ ಸಮುದಾಯ. ಹಾಗಾಗಿ ಮೀಸಲಾತಿ ನೀಡಬೇಕು. ನಮ್ಮ ಸಮುದಾಯಕ್ಕೆ ಬಿಎಸ್ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಇದೇ 28 ರಂದು ಪಂಚಮಸಾಲಿ ಸಮಾವೇಶ ನಡೆಯಲಿದೆ. ಸಮುದಾಯದ ಶಾಸಕರು ಸಮಾವೇಶದಲ್ಲಿ ಭಾಗವಹಿಸಿ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ಬಳಿಕ ದಾವಣಗೆರೆಯಲ್ಲಿ ಹೋರಾಟ ಬೇರೆ ಸ್ವರೂಪವನ್ನೇ ಪಡೆದುಕೊಳ್ಳಲಿದೆ ಎಂದರು.
ಪಂಚಮಸಾಲಿ ಮುಖಂಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇಲ್ಲಿಯವರೆಗೆ 206 ಕಿ.ಮೀ ಪಾದಯಾತ್ರೆ ಮಾಡಲಾಗಿದೆ. ಹಲವು ಸಮಸ್ಯೆಗಳ ನಡುವೆಯೂ ಸ್ವಾಮೀಜಿ ಪಾದಯಾತ್ರೆ ಮಾಡುತ್ತಿದ್ದಾರೆ. ಅಲ್ಲದೇ, ಎಲ್ಲರೂ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 26 ವರ್ಷಗಳಿಂದ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.