ಬಳ್ಳಾರಿ:ಗಣಿನಾಡು ಬಳ್ಳಾರಿ ನಗರದ ರೈಲು ನಿಲ್ದಾಣದಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದ್ದು, ಇನ್ಮುಂದೆ ರೈಲು ನಿಲ್ದಾಣದ ವಿದ್ಯುತ್ ದೀಪ, ಸೀಲಿಂಗ್ ಫ್ಯಾನ್ ಹಾಗೂ ಎಸಿ ಈ ಸೋಲಾರ್ ವಿದ್ಯುತ್ತಿನಿಂದಲೇ ನಡೆಯಲಿವೆ.
ಹೌದು, ಬಳ್ಳಾರಿ ರೈಲು ನಿಲ್ದಾಣಕ್ಕೆ ಜೆಸ್ಕಾಂ ಕಂಪನಿಯಿಂದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು. ಅದರಿಂದ ತಿಂಗಳಿಗೆ ಸುಮಾರು 3-4 ಲಕ್ಷ ರೂ. ಗಳವರೆಗೆ ವಿದ್ಯುತ್ ಬಿಲ್ ಪಾವತಿಸಲಾಗುತ್ತಿತ್ತು. ಅದರಿಂದ ಈ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿತ್ತು. ಈಗ ಸೋಲಾರ್ ವ್ಯವಸ್ಥೆಯನ್ನ ಅಳವಡಿಸಿದ್ದರಿಂದ ವಿದ್ಯುತ್ ಪೂರೈಕೆಗಾಗಿ ಪಾವತಿಸಬೇಕಿದ್ದ ಹಣವು ಉಳಿತಾಯವಾಗಲಿದೆ. ಆ ಹಣವನ್ನ ಬೇರೊಂದು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲು ಸಹಕಾರಿಯಾಗಲಿದೆ. ಅಂದಾಜು 170 ಕೆಬಿ ವ್ಯಾಟ್ ಸಾಮರ್ಥ್ಯವುಳ್ಳ ಈ ಸೋಲಾರ್ ಸಿಸ್ಟಮ್ ಅನ್ನು ರೈಲು ನಿಲ್ದಾಣದ ಶೆಲ್ಟರ್ಗಳ ಮೇಲೆ ಅಳವಡಿಸಲಾಗಿದೆ. ಬಿಸಿಲ ನಾಡೆಂದೇ ಖ್ಯಾತಿಯಾಗಿರುವ ಈ ಬಳ್ಳಾರಿ ಜಿಲ್ಲೆಯಲ್ಲಿ ಸೋಲಾರ್ ಸಿಸ್ಟಮ್ನಿಂದ ಅಗತ್ಯಕ್ಕಿಂತಲೂ ಹೆಚ್ಚು ವಿದ್ಯುತ್ ಶೇಖರಣೆಯಾಗುತ್ತೆ. ಶೂನ್ಯ ಬಂಡವಾಳ ಹೂಡಿಕೆಯಲ್ಲೇ ವಿದ್ಯುತ್ನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.