ದಾವಣಗೆರೆ/ಬಳ್ಳಾರಿ: ಮಾಜಿ ಸಚಿವ ಪಿ. ಟಿ. ಪರಮೇಶ್ವರ್ ನಾಯ್ಕ್ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ನಿಯಮವೇ ಮಾಯವಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಮತ್ತೆ ಸಾಮಾಜಿಕ ಅಂತರ ಮರೆತಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವೇ ಮಾಯ... ಕಾನೂನು ಎಲ್ಲರಿಗೂ ಒಂದೇ ಅಂದ್ರು ಸಿದ್ದರಾಮಯ್ಯ! - ದಾವಣಗೆರೆ ಸುದ್ದಿ
ಮದುವೆ ಕಾರ್ಯಕ್ರಮಕ್ಕೆ ಹೋಗಿ ಸಾಮಾಜಿಕ ಅಂತರ ನಿಯಮ ಮರೆತ ಮಾಜಿ ಸಿಎಂ ಸಿದ್ದರಾಮಯ್ಯ, ಕಾನೂನು ಎಲ್ಲರಿಗೂ ಒಂದೇ. ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇಲ್ಲ ಎಂದು ಹೇಳಿ ತಮ್ಮ ಜವಾಬ್ದಾರಿಯನ್ನೇ ಮರೆತ ಘಟನೆ ನಡೆಯಿತು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದ ಮದುವೆಗೆ ಕಾರಿನಲ್ಲಿ ಬಂದಿಳಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಿದ್ದರಾಮಯ್ಯ ಸುತ್ತ ಮುಗಿಬಿದ್ದರು. ಬಳಿಕ ನಡೆದುಕೊಂಡು ಹೋಗುವಾಗಲೂ ಯಾರೊಬ್ಬರೂ ಅಂತರ ಕಾಯ್ದುಕೊಳ್ಳಲಿಲ್ಲ. ವೇದಿಕೆ ಮೇಲೆ ಹೋದಾಗಲೂ ಇದೇ ಪುನರಾವರ್ತನೆ ಆಯಿತು. ಅಲ್ಲಿಯೂ ಸಹ ಕೊರೊನಾಗೆ ಕ್ಯಾರೇ ಎನ್ನದೆ ಜನರು ಮುಗಿಬಿದ್ದ ದೃಶ್ಯ ಕಂಡು ಬಂತು. ಸಿದ್ದರಾಮಯ್ಯ ಕೂಡಾ ಯಾವುದೇ ಸಾಮಾಜಿಕ ಅಂತರದ ಗೋಜಿಗೆ ಹೋಗದೇ ವಧು - ವರರಿಗೆ ಶುಭಕೋರಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕಾನೂನು ಎಲ್ಲರಿಗೂ ಒಂದೇ. ಬೇರೆ ಏನೂ ಇಲ್ಲ ಎಂದರು. ಮದುವೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರತಿಪಕ್ಷ ನಾಯಕ ಸಾಮಾಜಿಕ ಅಂತರ ಮರೆತ ಬಗ್ಗೆ ಕೇಳಿದ ಪ್ರಶ್ನೆಗೆ, ಹಳ್ಳಿ ಜನರು ಕರೆಯದಿದ್ದರೂ ಬಂದು ಬಿಡ್ತಾರೆ ಎಂದು ಹೇಳಿ ಹೊರಟರು. ಕಾರು ಹತ್ತುವಾಗಲೂ ಸಾಮಾಜಿಕ ಅಂತರ ಮಾಯವಾಗಿತ್ತು.