ಕೊಪ್ಪಳ/ಬಳ್ಳಾರಿ: ರಾಜ್ಯದಲ್ಲಿ ಇಂದು ಎರಡನೇ ಹಂತದ ಲೋಕಸಭಾ ಚುನಾವಣಾ ಹಬ್ಬ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಲೋಕಸಭಾ ಕೇತ್ರಗಳಾದ ಗಣಿನಾಡು ಬಳ್ಳಾರಿ ಹಾಗೂ ಭತ್ತದ ನಾಡು ಎನಿಸಿರುವ ಕೊಪ್ಪಳದ ಸಮಗ್ರ ಚಿತ್ರಣ ಇಲ್ಲಿದೆ.
ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳ ಲೋಕಸಭಾ ಕ್ಷೇತ್ರವು ಒಟ್ಟು ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡಿದೆ. ಕೊಪ್ಪಳದ ಐದು ವಿಧಾನಸಭಾ ಕ್ಷೇತ್ರಗಳಾದ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕನಕಗಿರಿ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಕೊಪ್ಪಳ ಲೋಕಸಭಾ ಕ್ಷೇತ್ರ ಒಳಗೊಂಡಿದೆ.
ಕೇತ್ರದ ಚಿತ್ರಣ:
ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 17,36,118 ಮತದಾರರಿದ್ದಾರೆ. ಈ ಪೈಕಿ 862466 ಪುರುಷರು, 8,73,539 ಮಹಿಳಾ ಮತದಾರರು ಮತ್ತು 113 ಇತರೆ ಮತದಾರರಿದ್ದಾರೆ. 575 ಸೇವಾ ಮತದಾರರು, 43 216 ಯುವ ಮತದಾರರು, ಹಾಗೂ 18797 ವಿಕಲಚೇತನ ಮತದಾರರು ಈ ಒಟ್ಟು ಮತದಾರರಲ್ಲಿ ಸೇರಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2033 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳು, ಮಸ್ಕಿ ಕ್ಷೇತ್ರದಲ್ಲಿ 231, ಕುಷ್ಟಗಿ ಕ್ಷೇತ್ರದಲ್ಲಿ 272, ಕನಕಗಿರಿ ಕ್ಷೇತ್ರದಲ್ಲಿ 261, ಗಂಗಾವತಿ ಕ್ಷೇತ್ರದಲ್ಲಿ 233, ಯಲಬುರ್ಗಾ ಕ್ಷೇತ್ರದಲ್ಲಿ 253, ಕೊಪ್ಪಳ ಕ್ಷೇತ್ರದಲ್ಲಿ 288 ಹಾಗೂ ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 226 ಮತಗಟ್ಟೆಗಳಿವೆ. ಈ ಪೈಕಿ ಹತ್ತು ಕಡೆ ಸಖಿ ಮತಗಟ್ಟೆಗಳು ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 5 ಮಾದರಿ ಮತಗಟ್ಟೆಗಳು ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ವಿಕಲಚೇತನ ಮತಗಟ್ಟೆ ಒಳಗೊಂಡಿವೆ.
ಕಣದಲ್ಲಿರುವ ಘಟಾನುಘಟಿಗಳು:
ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ : ಕೊಪ್ಪಳ ಲೋಕಸಭೆಗೆ ಎರಡನೇ ಬಾರಿ ಗದ್ದುಗೆ ಏರಬೇಕು ಎಂಬ ಆಸೆಯೊಂದಿಗೆ ಬಿಜೆಪಿ ಹುರಿಯಾಳಾಗಿರುವ ಕರಡಿ ಸಂಗಣ್ಣ ಅವರು ಕ್ಷೇತ್ರದಲ್ಲಿರುವ ಪ್ರಮುಖ ಅಭ್ಯರ್ಥಿ. ಬಡತನದಿಂದ ಬಂದಿರುವ ಸಂಗಣ್ಣ ಕರಡಿ ಸಜ್ಜನ ರಾಜಕಾರಣಿ ಎಂಬ ಮಾತಿದ್ದು, ಅವರು ರಾಜಕಾರಣದಲ್ಲಿ ಇಷ್ಟೆತ್ತರಕ್ಕೆ ಬೆಳೆದಿರುವುದರ ಹಿಂದೆ ಅವರ ಶ್ರಮವಿದೆ. ಸ್ವಂತ ಬಲದ ಮೇಲೆ 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶ ಪಡೆದರು. ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಸದಸ್ಯರಾಗಿ ರಾಜಕೀಯ ಆರಂಭಿಸಿದ ಕರಡಿ 1994 ರಿಂದ 2014ರವರೆಗೆ ನಡೆದ ಒಟ್ಟು7 ಚುನಾವಣೆಗಳಲ್ಲಿ ಹಿಟ್ನಾಳ್ ಕುಟುಂಬದ ವಿರುದ್ಧ 5 ಬಾರಿ ಗೆದ್ದು ಬೀಗಿದವರು. ಈಗ ಮತ್ತೆ ಅದೇ ಹಿಟ್ನಾಳ್ ಕುಟುಂಬದ ಎದುರಾಳಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯ ಕಣದಲ್ಲಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ್ : ಇನ್ನು ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಓಟಕ್ಕೆ ಬ್ರೇಕ್ ಹಾಕಲು ಸಿದ್ಧವಾಗಿದ್ದಾರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ್. ಕೊಪ್ಪಳ ರಾಜಕಾರಣದಲ್ಲಿ ಸಾಂಪ್ರದಾಯಿಕ ರಾಜಕೀಯ ಎದುರಾಳಿಯಾಗಿರುವ ಕರಡಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸುವ ನಿಟ್ಟಿನಲ್ಲಿ ರಾಜಕೀಯ ಪ್ರಭಾವಿಯಾಗಿರುವ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ್ ಅವರ ಮೂರನೇ ಪುತ್ರ ಕೆ. ರಾಜಶೇಖರ ಹಿಟ್ನಾಳ್ ಮುಂದಾಗಿದ್ದಾರೆ.. ಜಿಲ್ಲಾ ಪಂಚಾಯತ್ ಸದಸ್ಯರಾಗುವ ಮೂಲಕ ರಾಜಶೇಖರ್ ಹಿಟ್ನಾಳ್ ರಾಜಕೀಯಕ್ಕೆ ಎಂಟ್ರಿ ಪಡೆದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಸಹೋದರ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರಂತೆ ರಾಜಕೀಯ ಮಹತ್ವಾಕಾಂಕ್ಷಿಯಾಗಿರುವ ಕೆ. ರಾಜಶೇಖರ್ ಹಿಟ್ನಾಳ್ ಲೋಕಸಭೆ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ. ತಂದೆಯನ್ನು ಪದೇಪದೇ ಸೋಲಿಸಿದ ಸಂಗಣ್ಣ ಕರಡಿಯನ್ನು ಸೋಲಿಸುವ ಪಣದೊಂದಿಗೆ ಅಖಾಡಕ್ಕಿಳಿದಿದ್ದಾರೆ. ಕೆ. ರಾಜಶೇಖರ್ ಹಿಟ್ನಾಳ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷವಿದೆ.
ಇನ್ನುಳಿದಂತೆ ಒಟ್ಟು 14 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ್, ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಇನ್ನುಳಿದಂತೆ ಬಿಎಸ್ಪಿಯಿಂದ ಶಿವಪುತ್ರಪ್ಪ ಗುಮಗೇರಾ, ಸರ್ವ ಜನತಾ ಪಾರ್ಟಿಯಿಂದ ಅನ್ನೋಜಿರಾವ್ ಜಿ, ಮಾರ್ಕ್ಸಿಸ್ಟ್ ಲೆನಿನಿಸ್ಟ್ ಪಾರ್ಟಿ ಆಫ್ ಇಂಡಿಯಾ (ರೆಡ್ ಫ್ಲಾಗ್) ಅಭ್ಯರ್ಥಿಯಾಗಿ ಕಾಮ್ರೆಡ್ ಬಿ. ಬಸವಲಿಂಗಪ್ಪ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಬಂಡಿಮಠ ಶರಣಯ್ಯ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸಿಸ್ಟ್ ಲೇನಿನಿಸ್ಟ್ (ರೆಡ್ ಸ್ಟಾರ್) ನಿಂದ ಹೇಮರಾಜ ವೀರಾಪುರ, ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಗರಾಜ ಕಲಾಲ್, ಬಾಲರಾಜ ಯಾದವ್, ಮಲ್ಲಿಕಾರ್ಜುನ ಹಡಪದ, ಸತೀಶ್ ರೆಡ್ಡಿ, ಸುರೇಶ್ ಗೌಡ ಮುಂದಿನ ಮನೆ ಹಾಗೂ ಸುರೇಶ್ ಹೆಚ್ ಅವರು ಕಣದಲ್ಲಿದ್ದಾರೆ.
ಸಕಲ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ:
ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ವರೆಗೆ ಮತದಾನ ನಡೆಯಲಿದ್ದು ಕ್ಷೇತ್ರದಲ್ಲಿ 17,36,118 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕಣದಲ್ಲಿರುವ ಒಟ್ಟು 14 ಅಭ್ಯರ್ಥಿಗಳ ಹಣೆಬರಹ ಬರೆಯಲು ಕ್ಷೇತ್ರದ ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಚುನಾವಣೆ ಕಾರ್ಯಕ್ಕಾಗಿ ಒಟ್ಟು 9817 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 1344 ಸಿಬ್ಬಂದಿ, ಮಸ್ಕಿ- 1160, ಕುಷ್ಟಗಿ- 1308, ಕನಕಗಿರಿ- 1256, ಗಂಗಾವತಿ- 1120, ಯಲಬುರ್ಗಾ- 1216, ಕೊಪ್ಪಳ- 1384, ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ1029 ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಶಾಂತಿ ಹಾಗೂ ಸುವ್ಯವಸ್ಥಿತ ಚುನಾವಣೆಗಾಗಿ ಪೊಲೀಸ್ ಇಲಾಖೆ ಸಾಕಷ್ಟು ಭದ್ರತೆಯನ್ನು ಕೈಗೊಂಡಿದ್ದು ಭದ್ರತೆಗಾಗಿ ಓರ್ವ ಎಸ್ಪಿ, 14 ಡಿಎಸ್ಪಿ, 18 ಸಿಪಿಐ/ಪಿಐ, 13 ಪಿಎಸ್ಐ, 96 ಎಎಸ್ಐ, 928 ಪೊಲೀಸ್ ಪೇದೆಗಳು, 898 ಗೃಹ ರಕ್ಷಕ ದಳ ಸಿಬ್ಬಂದಿ, 15 ಡಿಎಆರ್ ತುಕಡಿ, 5 ಕೆಎಸ್ಆರ್ಪಿ ತುಕಡಿ ಹಾಗೂ ಸಿಐಎಸ್ಎಫ್ ಮತ್ತು ಗೋವಾ ಸ್ಯಾಫ್ ಕಂಪೆನಿಗಳು ಜಿಲ್ಲೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.