ಬಳ್ಳಾರಿ :ತರಕಾರಿ ಬೆಳೆಗಳಲ್ಲಿ ಪ್ರಮುಖವಾದದ್ದು ಹಿರೇಕಾಯಿ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತವಾಗಿಯೂ ಬೆಳೆಯಬಹುದು. ಅಲ್ಪಾವಧಿ ಬೆಳೆಯಾದ ಇದಕ್ಕೆ ಸ್ಥಳೀಯ ಮಾರುಕಟ್ಟೆ ಇರುವುದರಿಂದ ಸಾಕಷ್ಟು ಲಾಭಕಾರಿಯೂ ಹೌದು. ಜಿಲ್ಲೆಗೆ ಹೊಂದಿಕೊಂಡಿರುವ ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಹೋಬಳಿಯ ತಿಮ್ಮಲಾಪುರ ಗ್ರಾಮದ ಸಹೋದರರಿಬ್ಬರು ಹಿರೇಕಾಯಿ ಬೆಳೆದು ಬದುಕು ಹಿಗ್ಗಿಸಿಕೊಂಡಿದ್ದಾರೆ.
ಹಿರೇಕಾಯಿ ಬೆಳೆದು ಹಿಗ್ಗಿದ ಸಹೋದರರು ತಿಮ್ಮಲಾಪುರ ಗ್ರಾಮದ ರಾಮರೆಡ್ಡಿ ಹಾಗೂ ಓಂಕಾರ ರೆಡ್ಡಿ ಎಂಬ ಸಹೋದರರು ತಮ್ಮ 9 ಎಕರೆ ಭೂಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಹಿರೇಕಾಯಿ ಬೆಳೆ ಬೆಳೆಯುತ್ತಾ ಬಂದಿದ್ದಾರೆ. ಇದೀಗ ಇವರು ಬೆಳೆದಿರುವ ಹಿರೇಗಾಯಿ ದೂರದ ಹೈದರಾಬಾದ್ ಹಾಗೂ ಸಿಕಂದರಾಬಾದ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಕೆಜಿಗೆ 30 ರಿಂದ 40 ರೂಪಾಯಿಗೆ ಮಾರಾಟವಾಗುತ್ತಿವೆ. ಇದರಿಂದ 36 ಲಕ್ಷ ರೂ. ಗಳವರೆಗೂ ವಾರ್ಷಿಕ ಆದಾಯ ಬರಲಿದೆ ಎಂದು ರಾಮರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿ ಗಣಿಗಾರಿಕೆಯೊಂದಿಗೆ ನಂಟಿದ್ದ ರಾಮರೆಡ್ಡಿ
ರಾಮರೆಡ್ಡಿ 2004ನೇ ಇಸವಿಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಬಳ್ಳಾರಿಗೆ ಬಂದಿದ್ದರು. ಆ ವರ್ಷದಲ್ಲಿಯೇ ಹಾಲಿ ಸಚಿವ ಆನಂದಸಿಂಗ್ ಅವರ ಒಡೆತನದ ಎಸ್ವಿಕೆ ಮೈನ್ಸ್ನ ಅಂಗ ಸಂಸ್ಥೆಯಾದ ಗಜಾನನ ಮಿನರಲ್ಸ್ನ 24 ಎಕರೆಯಲ್ಲಿನ ಗಣಿಗಾರಿಕೆಯನ್ನು ಲೀಸ್ ಪಡೆಯುತ್ತಾರೆ. ಗುಣಮಟ್ಟದ ಅದಿರು ಇರದ ಕಾರಣ, ಅದನ್ನ ಒಂದು ವರ್ಷದ ಮಟ್ಟಿಗೆ ಇಟ್ಟುಕೊಂಡು ಬಳಿಕ ಹಾಲಿ ಸಚಿವ ಬಿ.ಶ್ರೀರಾಮುಲು ಅವರಿಗೆ ಮಾರಾಟ ಮಾಡಿದ್ದರು.
ಆ ಬಳಿಕ ಸಂಡೂರಿನ ಸ್ವಾಮಿಹಳ್ಳಿ ಮತ್ತೆ ಮೈನಿಂಗ್ ಕಂಪನಿಯನ್ನ ಲೀಸ್ ಪಡೆಯುತ್ತಾರೆ. ಇದರಿಂದ ಕೊಂಚಮಟ್ಟಿಗೆ ಹಣ ಬಂದ ಹಿನ್ನೆಲೆ ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಕಪ್ಪಗಲ್ಲು ರಸ್ತೆಯಲ್ಲಿ ಮನೆಯನ್ನ ನಿರ್ಮಿಸಿಕೊಂಡಿರುತ್ತಾರೆ. ಇದಕ್ಕಿದಂತೆಯೇ ಗಣಿಗಾರಿಕೆಯಲ್ಲಿ ನಷ್ಟ ಉಂಟಾಗಿ, ಮನೆಮಠ ಕಳೆದುಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತಿಮ್ಮಲಾಪುರ ಗ್ರಾಮಕ್ಕೆ ತೆರಳಿದ್ದರು.
ಬಳಿಕ ಪಿತ್ರಾರ್ಜಿತ ಆಸ್ತಿಯೇ ನಮಗೆ ಗತಿಯೆಂದು ತಿಳಿದ ರಾಮರೆಡ್ಡಿ ಹಾಗೂ ಅವರ ಸಹೋದರ ಒಂಕಾರರೆಡ್ಡಿ, ಕೇವಲ ಒಂದು ಲಕ್ಷ ರೂಗಳ ವೆಚ್ಚದಲ್ಲಿ ಹಿರೇಕಾಯಿ ಬೆಳೆಯಲಾರಂಭಿಸಿದರು. ಈ ಬೆಳೆ ಅವರ ಕೈ ಹಿಡಿದಿದ್ದು, ಈಗ 9 ಎಕರೆಯಲ್ಲಿ ಹಿರೇಕಾಯಿ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಇದನ್ನೂ ಓದಿ:ಬೀದಿನಾಯಿಗಳಿಗೆ ಆಹಾರ ಹಕ್ಕಿದೆ, ಅವುಗಳನ್ನ ಪೋಷಿಸುವ ಹಕ್ಕೂ ಜನರಿಗಿದೆ.. ದೆಹಲಿ ಕೋರ್ಟ್ ಆದೇಶ