ಕರ್ನಾಟಕ

karnataka

By

Published : Oct 1, 2019, 6:48 AM IST

ETV Bharat / city

ವಿಜಯನಗರ ಜಿಲ್ಲೆ ರಚನೆಗೆ ರೆಡ್ಡಿ ಸಹೋದರರ ವಿರೋಧ: ಸಾಹಿತಿ ಕುಂ.ವೀರಭದ್ರಪ್ಪ ಆಕ್ಷೇಪ

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಾಗಬೇಕು. ಇದರಿಂದ ಆ ಭಾಗದ ಜನರಿಗೆ ಅನುಕೂಲ ಆಗಲಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪನವರು ಅಭಿಪ್ರಾಯಪಟ್ಟಿದ್ದಾರೆ.

ಸಾಹಿತಿ ಕುಂ.ವೀರಭದ್ರಪ್ಪ

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ರೆಡ್ಡಿ ಸಹೋದರರ ವಿರೋಧಕ್ಕೆ ಜಿಲ್ಲೆಯ ಸಾಹಿತಿ ಕುಂ.ವೀರಭದ್ರಪ್ಪನವರು ಅತೀವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಪ್ರಸ್ತಾಪ ಇಂದು, ನಿನ್ನೆಯದ್ದಲ್ಲ.‌ ಅದು ದಶಕಗಳ ಕಾಲದ ಬೇಡಿಕೆ. ಈ ಜಿಲ್ಲೆಯ ಗಡಿಯಂಚಿನ ಭಾಗದಲ್ಲಿರೋ ಹಡಗಲಿ-ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಿಂದ ರೈತರು, ಕೃಷಿ- ಕೂಲಿ ಕಾರ್ಮಿಕರು ಜಿಲ್ಲಾ ಕೇಂದ್ರಕ್ಕೆ ಭೇಟಿಯಾಗಲು ಕನಿಷ್ಠ ಎರಡ್ಮೂರು ದಿನಗಳಾದ್ರೂ ಬೇಕು. ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಬರುವವರ ಪರಿಪಾಟ ರೆಡ್ಡಿ ಸಹೋದರರಿಗೆ ಏನು ಗೊತ್ತು? ಎಂದು ಛೇಡಿಸಿದ್ದಾರೆ.

ಹಾಲಿ ಬಿಜೆಪಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ, ಗಾಲಿ ಕರುಣಾಕರ ರೆಡ್ಡಿ ಅವರು ಮೂಲತಃ ನೆರೆಯ ಆಂಧ್ರಪ್ರದೇಶದವರು. ಮೇಲಾಗಿ, ಅವರು ತೆಲುಗು ಭಾಷಿಕರ ಪ್ರಭಾವಕ್ಕೆ ಒಳಗಾದವರು. ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಆಗೋದ್ರಿಂದ ಶ್ರೀಸಾಮಾನ್ಯರಿಗೆ ಏನೇನು ಪ್ರಯೋಜನ ಆಗಲಿದೆ ಎಂಬುದರ ಬಗ್ಗೆ ಈ ರೆಡ್ಡಿ ಸಹೋದರರಿಗೆ ಅರಿವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಅನರ್ಹ ಶಾಸಕ ಆನಂದ ಸಿಂಗ್‌ ನಮಗೆ ಮುಖ್ಯವಲ್ಲ. ಇಷ್ಟುದಿನ ಬಿಟ್ಟು ಈಗ ಆನಂದ ಸಿಂಗ್‌ ವಿಜಯನಗರ ಜಿಲ್ಲೆ ರಚನೆ ಕುರಿತು ಮಾತನಾಡುತ್ತಿದ್ದಾರೆ. ಆದರೆ, ಹೊಸ ಜಿಲ್ಲೆ ರಚನೆಯಾಗಬೇಕೆಂದು ಈ ಭಾಗದ ಜನರ ದಶಕದ ಹೋರಾಟ. ಸಿಎಂ ಯಡಿಯೂರಪ್ಪನವ್ರು ಯಾರ ಒತ್ತಡಕ್ಕೂ ಮಣಿಯ ಬಾರದು. ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಹೊಸ ಜಿಲ್ಲೆ ಘೋಷಣೆ ಮಾಡಬೇಕು ಎಂದು ಸಾಹಿತಿ ವೀರಭದ್ರಪ್ಪ ಆಗ್ರಹಿಸಿದ್ದಾರೆ.

ಬಳ್ಳಾರಿ ತೆಲುಗು ಭಾಷಿಕರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ. ಆದರೆ, ಉದ್ದೇಶಿತ ನೂತನ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಪಶ್ಚಿಮ ತಾಲೂಕುಗಳು ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಭಾಷಿಕವಾಗಿ ಭಿನ್ನವಾಗಿವೆ. ಪಶ್ಚಿಮದ ಕೆಲವು ತಾಲೂಕುಗಳು ಬಳ್ಳಾರಿಯಿಂದ 150 ಕಿ.ಮೀ ಗೂ ಅಧಿಕ ದೂರದಲ್ಲಿವೆ. ಹೊಸಪೇಟೆ ಜಿಲ್ಲಾ ಕೇಂದ್ರವಾದರೆ, ಈ ಅಂತರ ಕಡಿಮೆಯಾಗುತ್ತದೆ. ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ವಿಮಾನ ನಿಲ್ದಾಣ ಸೇರಿದಂತೆ ಇತರೆ ಸೌಲಭ್ಯ ಹೊಂದಿರುವ ಹೊಸಪೇಟೆ ಜಿಲ್ಲಾ ಕೇಂದ್ರವಾಗಲು ಎಲ್ಲ ರೀತಿಯ ಅರ್ಹತೆ ಹೊಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವರು ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಅಥವಾ ಹೂವಿನಹಡಗಲಿ ಜಿಲ್ಲಾ ಕೇಂದ್ರವಾಗಬೇಕು ಎಂದು ವಾದ ಮಂಡಿಸುತ್ತಿದ್ದಾರೆ. ಆದರೆ, ಈ ತಾಲೂಕುಗಳಲ್ಲಿ ಅಂತಹ ಸೌಲಭ್ಯಗಳಿಲ್ಲ. ಹೊಸಪೇಟೆಗೆ ವಿಶೇಷ ಚರಿತ್ರೆ ಇದೆ. ಆಡಳಿತದ ದೃಷ್ಟಿಯಿಂದ ಅದೇ ಸೂಕ್ತ. ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಣ್ಣ, ಸಣ್ಣ ಜಿಲ್ಲೆಗಳನ್ನಾಗಿ ರಚನೆ ಮಾಡಲಾಗುತ್ತಿದೆ. ವಿಶಾಲವಾಗಿರುವ ಬಳ್ಳಾರಿ ವಿಭಜನೆ ಮಾಡೋದರಲ್ಲಿ ತಪ್ಪೇನಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ABOUT THE AUTHOR

...view details