ಬಳ್ಳಾರಿ:ವಿಪರೀತ ಮಳೆ ಮತ್ತು ನಾನಾ ರೋಗಗಳಿಂದ ಇಳುವರಿ ಕುಸಿದಿದ್ದರೂ ದಾಖಲೆ ಪ್ರಮಾಣದಲ್ಲಿ ದರ ಏರಿಕೆಯಾಗುವ ಮೂಲಕ ಸಂಕಷ್ಟದಲ್ಲಿದ್ದ ರೈತರ ಕೈಹಿಡಿದಿದೆ.
ಬಳ್ಳಾರಿಯಲ್ಲಿ ಮೆಣಸಿನಕಾಯಿ ದರ ಏರಿಕೆ ಕಳೆದ ವರ್ಷ ಉಂಟಾದ ಪ್ರವಾಹದಿಂದಾಗಿ ತೇವಾಂಶ ಹೆಚ್ಚಾಗಿತ್ತು. ಕೆಲ ಗಿಡಗಳು ಕೊಳೆತು ಹೋದವು. ಜೊತೆಗೆ ವಿವಿಧ ರೋಗಗಳು ಕಾಣಿಸಿಕೊಂಡು ಇಳುವರಿ ಕಡಿಮೆಯಾಯಿತು. ಇದರಿಂದ ಲಕ್ಷಾಂತರ ರೂಪಾಯಿ ವ್ಯಯಿಸಿದ್ದ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು.
ಇದನ್ನೂ ಓದಿ:ಬಳ್ಳಾರಿ ಜಿಲ್ಲೆ ವಿಭಜನೆ ವಿರುದ್ಧ ಹೋರಾಟ: ಕನ್ನಡ ಯುವಕ ಸಂಘದ ಬೆಂಬಲ
ಹಾಕಿದ್ದ ಬಂಡವಾಳ ಬರುತ್ತೋ ಇಲ್ಲವೋ ಎಂಬ ಆತಂಕವೂ ಬೆಳೆಗಾರರಲ್ಲಿತ್ತು. ಅದೃಷ್ಟವೆಂಬಂತೆ ಇಳುವರಿ ಕಡಿಮೆಯಾದರೂ ದಾಖಲೆ ಮಟ್ಟದಲ್ಲಿ ದರ ಏರಿಕೆಯಾಗುವ ಮೂಲಕ ರೈತರ ಮೊಗದಲ್ಲಿ ಸಂತಸ ತಂದಿದೆ.
ಬ್ಯಾಡಗಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ ₹51 ಸಾವಿರ ದಾಟಿದೆ. 555 ಸೀಡ್ಸ್ ಮೆಣಸಿನಕಾಯಿ ಕ್ವಿಂಟಾಲ್ಗೆ ₹36 ಸಾವಿರ, ಇನ್ನೂ ಗುಂಟೂರು ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ ₹16-18 ಸಾವಿರ ಇದೆ.
ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬಿಟ್ಟರೆ ಹೆಚ್ಚು ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತದೆ. ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ ಪ್ರತಿ ಕ್ವಿಂಟಾಲ್ಗೆ ₹33 ಸಾವಿರ ಮಾರಾಟವಾಗಿದ್ದೇ ದಾಖಲೆಯಾಗಿತ್ತು. ಆದರೆ, ಈ ಬಾರಿ ₹51 ಸಾವಿರ ದಾಟುವ ಮೂಲಕ ಹಿಂದಿನ ವರ್ಷದ ದಾಖಲೆ ಮುರಿದಿದೆ.
ಈ ವರ್ಷ ಇಳುವರಿ ಮಾತ್ರ ಅರ್ಧದಷ್ಟು ಕಡಿಮೆಯಾಗಿದೆ. ಪ್ರತಿ ಎಕರೆಗೆ 30 ಕ್ವಿಂಟಾಲ್ ಮೆಣಸಿನಕಾಯಿ ಇಳುವರಿ ಬರುತ್ತಿತ್ತು. ಆದರೆ, ಈ ಬಾರಿ ಕೇವಲ 15 ಕ್ವಿಂಟಾಲ್ ಬರುತ್ತಿದೆ. ಉತ್ತಮ ದರ ಸಿಗುತ್ತಿರುವ ಕಾರಣ ಮೆಣಸಿನಕಾಯಿ ಬೆಳೆದ ರೈತರಿಗೆ ಸ್ವಲ್ಪ ನೆಮ್ಮದಿ ತಂದಿದೆ.