ಕರ್ನಾಟಕ

karnataka

ETV Bharat / city

3ನೇ ಅಲೆ ಎದುರಿಸಲು ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಸಚಿವ ಆನಂದ್ ಸಿಂಗ್

ಜಿಂದಾಲ್ ಕಾರ್ಖಾನೆ ಎದುರುಗಡೆ ವಿಶಾಲ ಮೈದಾನದಲ್ಲಿ ಸ್ಥಾಪಿಸಲಾಗಿರುವ ಸಾವಿರ ಆಕ್ಸಿಜನ್ ಹಾಸಿಗೆಗಳ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗಿಂದು‌ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಭೇಟಿ ನೀಡಿ ಪರಿಶೀಲಿಸಿದರು..

Minister Anand Singh
ಸಚಿವ ಆನಂದ್ ಸಿಂಗ್

By

Published : May 29, 2021, 8:10 PM IST

ಬಳ್ಳಾರಿ :ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳುತ್ತಿದೆ.

ತಜ್ಞರ ವರದಿ ಆಧರಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಕ್ಕಳಿಗಾಗಿಯೇ 50 ವೆಂಟಿಲೇಟರ್​​ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಅದೇ ರೀತಿ ತಾಲೂಕು ಕೇಂದ್ರಗಳಲ್ಲಿ 5 ರಿಂದ 10 ವೆಂಟಿಲೇಟರ್​ಗಳ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರು ತಿಳಿಸಿದರು.

3ನೇ ಅಲೆ ಎದುರಿಸುವ ಸಿದ್ಧತೆ ಪರಿಶೀಲಿಸಿದ ಸಚಿವ ಆನಂದ್ ಸಿಂಗ್

ಓದಿ: ಸೋಂಕು ನಿಯಂತ್ರಣಕ್ಕೆ ನಗರದಲ್ಲಿ ವೈಮಾನಿಕ ದ್ರಾವಣ ಸಿಂಪಡಣೆಗೆ ಆರ್ ಅಶೋಕ್ ಚಾಲನೆ

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಕ್ಕಳಿಗಾಗಿ ಆಕ್ಸಿಜನ್, ಬೆಡ್‍, ಮಾಸ್ಕ್ ಖರೀದಿಸಲು ನಿರ್ಧರಿಸಲಾಗಿದೆ. 10 ದಿನದೊಳಗೆ ಟೆಂಡರ್ ಕರೆಯಲಾಗುವುದು ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿರುವುದು ಸಂತೋಷದ ವಿಷಯ.

ಹೊಸದಾಗಿ 25 ವೆಂಟಿಲೇಟರ್​​ಗಳು ಬಂದಿದ್ದು, ಅವುಗಳಲ್ಲಿ 10 ಜಿಲ್ಲಾಸ್ಪತ್ರೆ, 10 ವಿಮ್ಸ್ ಹಾಗೂ 5 ಜಿಂದಾಲ್ ಆಸ್ಪತ್ರೆಯಲ್ಲಿ ಅಳವಡಿಸಲು ಕ್ರಮವಹಿಸಲಾಗಿದೆ.

ಆಸ್ಪತ್ರೆಗಳಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಆನಂದ್ ಸಿಂಗ್

ಜಿಲ್ಲೆಯಲ್ಲಿ ವೆಂಟಿಲೇಟರ್ ಬೆಡ್‍ಗಳ ಕೊರತೆ ಇದೆ ಎನ್ನುವ ಆತಂಕವೂ ಬೇಡ ಎಂದು ಜಿಲ್ಲೆಯ ಜನರಿಗೆ ಅಭಯ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರು, ಮೊದಲಿನಂತೆ ಎಸ್‍ಎಂಎಸ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಜಿಂದಾಲ್ ಬಳಿಯ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯಲ್ಲಿ 126 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದು, ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಸಾರ್ವಜನಿಕರ ಹಿತದೃಷ್ಠಿಯಿಂದ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ವಿಧಿಸಲಾಗಿರುವ ಸಂಪೂರ್ಣ ಲಾಕ್‍ಡೌನ್ ಆದೇಶವನ್ನು ಜೂನ್‌ 7ರವರೆಗೆ ವಿಸ್ತರಿಸಲಾಗಿದೆ.

ಮೇ 31 ಮತ್ತು ಜೂನ್ 1ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು. ಜಿಂದಾಲ್‍ಗೆ ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ಸರಕಾರ ಕೈಗೊಂಡಿರುವ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿದರು.

ಸಚಿವ ಆನಂದ್ ಸಿಂಗ್

ಜಿಂದಾಲ್ ಬಳಿಯ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗೆ ಸಚಿವ ಆನಂದಸಿಂಗ್ ಭೇಟಿ: ಪರಿಶೀಲನೆ

ಜಿಂದಾಲ್ ಕಾರ್ಖಾನೆ ಎದುರುಗಡೆ ವಿಶಾಲ ಮೈದಾನದಲ್ಲಿ ಸ್ಥಾಪಿಸಲಾಗಿರುವ ಸಾವಿರ ಆಕ್ಸಿಜನ್ ಹಾಸಿಗೆಗಳ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಗಿಂದು‌ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರೊಂದಿಗೆ ಸಂವಾದ ನಡೆಸಿದರು. ಚಿಕಿತ್ಸೆ ಹೇಗೆ ನೀಡಲಾಗುತ್ತಿದೆಯೇ..?, ಔಷಧಿ ಸರಿಯಾಗಿ ಕೊಡುತ್ತಿದ್ದಾರೆಯೇ..?,ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಂದು ತಪಾಸಣೆ ಮಾಡುತ್ತಿದ್ದಾರೆಯೇ..?,ಊಟ ಹೇಗಿದೆ ಎಂಬುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸೋಂಕಿತರೊಂದಿಗೆ ಚರ್ಚೆ ನಡೆಸಿದರು.

ABOUT THE AUTHOR

...view details