ಬಳ್ಳಾರಿ :ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರೋದು ನನ್ನ ಗಮನದಲ್ಲಿದೆ. ಶೀಘ್ರದಲ್ಲೇ ಅವುಗಳನ್ನು ವೈದ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಕೋವಿಡ್-19 ಆಸ್ಪತ್ರೆಗಳನ್ನಾಗಿ ಪರಿವರ್ತಿಸುವ ವ್ಯವಸ್ಥೆ ಮಾಡಲಾಗಿದೆ. ಏಳರಿಂದ ಎಂಟು ಸಾವಿರದ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸುರಕ್ಷತಾ ಪರಿಕರಗಳ ಕಿಟ್(ಪಿಪಿಇ)ಗಳ ಕೊರತೆಯಾಗುವುದು ಸಹಜ. ಇದು ನಮ್ಮ ಗಮನದಲ್ಲಿದ್ದು ಆದಷ್ಟು ಬೇಗನೆ ಸುರಕ್ಷತಾ ಪರಿಕರಗಳ ಕಿಟ್ ಒದಗಿಸಿಕೊಡಲಾಗುವುದು ಎಂದರು.
ವೈದ್ಯರಿಗೆ ಸುರಕ್ಷತಾ ಪರಿಕರ ಶೀಘ್ರ ಪೂರೈಕೆ.. ಸಚಿವ ಬಿ. ಶ್ರೀರಾಮುಲು ಭರವಸೆ ಕಳಪೆ ಮಾಸ್ಕ್ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಕಳಪೆ ಮಾಸ್ಕ್ ಖರೀದಿಸಬಾರು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರೊಂದಿಗೆ ಚರ್ಚಿಸಲಾಗಿದೆ. ಎನ್-95 ಮಾಸ್ಕ್, ತ್ರಿಬಲ್ ಲೇಯರ್ ಮಾಸ್ಕ್, ಸುರಕ್ಷತಾ ಪರಿಕರಗಳ ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್ ಅಗತ್ಯತೆ ಕುರಿತು ಅವರಿಗೆ ತಿಳಿಸಲಾಗಿತ್ತು. ಸದ್ಯ ಅವರು ವಿಶೇಷ ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನು ಆದಷ್ಟು ಬೇಗ ಸರಬರಾಜು ಮಾಡಲಾಗುತ್ತೆ ಎಂದರು.
ಹೊಸಪೇಟೆಯಲ್ಲಿ 3 ಸೋಂಕಿತರು ಪತ್ತೆ:ಹೊಸಪೇಟೆಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಡೀ ನಗರವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಸೋಂಕಿತರ ಮನೆಯ ಸುತ್ತ 5 ಕಿ.ಮೀ ಬಫರ್‍ಝೋನ್ ಎಂದು ಘೋಷಣೆ ಮಾಡಲಾಗಿದೆ. ಸೋಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.