ಬಳ್ಳಾರಿ: ಮಹಾಮಾರಿ ಕೋವಿಡ್ ಎಫೆಕ್ಟ್ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎನ್ನಲಾದ ಖಾಸಗಿ ಶಾಲಾ-ಕಾಲೇಜುಗಳು ಇದೀಗ ಪ್ರವೇಶಾತಿ ಶುಲ್ಕ ವಸೂಲಾತಿಗೆ ಮುಂದಾಗಿದ್ದು, ಪೋಷಕರ ಮೇಲೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಆನ್ಲೈನ್ ಕ್ಲಾಸ್ ಮುಂದುವರಿಸಲು ಇಷ್ಟವಿಲ್ಲದ ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಗಳಿಂದ ವಿಮುಖರಾಗಲು ವರ್ಗಾವಣೆ ಪ್ರಮಾಣ ಪತ್ರ ಕೇಳಲು ಹೋದಾಗ, ಈ ಬಾರಿಯ ಶೈಕ್ಷಣಿಕ ವರ್ಷದ ಪ್ರವೇಶಾತಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ರವೇಶಾತಿ ಶುಲ್ಕ ಪಾವತಿಸಲು ನಿರಾಕರಿಸಿದ್ರೆ ಖಾಲಿ ಕಾಗದದ ಮೇಲೆ ಪೋಷಕರ ಸಹಿ ಮಾಡಿಸಿಕೊಂಡು ಬ್ಲಾಕ್ಮೇಲ್ ತಂತ್ರಗಾರಿಕೆಗೆ ಮುಂದಾಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬಳ್ಳಾರಿಯ ಬಸವೇಶ್ವರ ನಗರದಲ್ಲಿರುವ ಸಂಗಮೇಶ್ವರ ದೇಗುಲದ ಬಳಿಯಿರುವ ಕಿಡ್ಜ್ ಮಿಲೇನಿಯನ್ ಸ್ಕೂಲ್ನ ಮುಖ್ಯ ಶಿಕ್ಷಕರಾದ ಸೈಯದ್ ರಿಫ್ತಾ ಅವರು ಖಾಲಿ ಕಾಗದದ ಮೇಲೆ ಪೋಷಕರ ಸಹಿ ಮಾಡಿಸಿಕೊಂಡು, ಬ್ಲಾಕ್ಮೇಲ್ ಮಾಡಿ ಪ್ರವೇಶಾತಿ ಶುಲ್ಕವನ್ನು ವಸೂಲಿ ಮಾಡಿದ್ದಾರೆ ಎಂದು ವಿದ್ಯಾರ್ಥಿ ಗಿರಿ ಅವರ ತಂದೆ ಧ್ರುವಕುಮಾರ ಆರೋಪಿಸಿದ್ದಾರೆ.