ಬಳ್ಳಾರಿ:ಮಂಗಳೂರು ಮತ್ತು ಕರಾವಳಿ ಭಾಗದಲ್ಲಿ ಆರಂಭವಾಗಿದ್ದ ಧರ್ಮ ದಂಗಲ್ ಇದೀಗ ಬಿಸಿಲ ನಾಡು ಬಳ್ಳಾರಿವರೆಗೂ ವ್ಯಾಪಿಸಿದೆ. ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆ ಬಳ್ಳಾರಿ ಜಿಲ್ಲಾದ್ಯಂತ ಎಲ್ಲ ಮಸೀದಿ, ಮಂದಿರಗಳಿಗೆ ಮೈಕ್ ಬಳಸಲು ಅನುಮತಿ ಕಡ್ಡಾಯಗೊಳಿಸಿ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ. ಒಂದು ವೇಳೆ, ಅನುಮತಿ ಇಲ್ಲದೇ ಮೈಕ್ ಬಳಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಮಸೀದಿ, ಮಂದಿರಗಳಲ್ಲಿ ಮೈಕ್ ಬಳಸಲು ಅನುಮತಿ ಕಡ್ಡಾಯ: ಬಳ್ಳಾರಿ ಎಸ್ಪಿ - Bellary Sp Saidullah Adawat
ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಲು ಅನುಮತಿ ಕಡ್ಡಾಯಗೊಳಿಸಿ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ಜಿಲ್ಲಾದ್ಯಂತ 685 ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ನೋಟಿಸ್ ನೀಡಲಾಗಿದೆ. ಬಹುತೇಕ ಎಲ್ಲರಿಗೂ ಮೈಕ್ ಬಳಸಲು ಮತ್ತು ಎಷ್ಟು ಡೆಸಿಬಲ್ಸ್ ಸೌಂಡ್ ಇಡಬೇಕು ಎನ್ನುವುದರ ಬಗ್ಗೆ ನೋಟಿಸ್ ನೀಡಲಾಗಿದೆ. ಈಗಾಗಲೇ 108 ಧಾರ್ಮಿಕ ಕೇಂದ್ರದವರು ಅನುಮತಿ ಪಡೆದುಕೊಂಡಿದ್ದಾರೆ.
ಎರಡು ವರ್ಷಕ್ಕೆ ಅನುಗುಣವಾಗುವಂತೆ ಅನುಮತಿ ನೀಡಲಾಗುತ್ತಿದೆ. ಆದರೆ, ನಿಗದಿತ ಗಡುವಿನೊಳಗೆ ಅನುಮತಿ ಪಡೆಯಬೇಕು. ವಿಳಂಬ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಎಚ್ಚರಿಕೆ ನೀಡಿದ್ದಾರೆ. ಜನವಸತಿ ಪ್ರದೇಶ, ಮಾರ್ಕೆಟ್ ಪ್ರದೇಶ, ಜನಸಂದಣಿ ಇರುವ ಪ್ರದೇಶ, ಗ್ರಾಮೀಣ ಮತ್ತು ನಗರ ಪ್ರದೇಶ ಹೀಗೆ ನಾಲ್ಕಾರು ವಿಭಾಗ ಮಾಡಲಾಗಿದ್ದು, ನಿಗದಿತ ಶುಲ್ಕದೊಂದಿಗೆ ಅನುಮತಿ ಪಡೆಯಲು ನೋಟಿಸ್ ನೀಡಲಾಗಿದೆ.