ಬಳ್ಳಾರಿ: ಆಸ್ಪತ್ರೆ, ವೈದ್ಯರೆಂದರೆ ಜನರು ಬೆಚ್ಚಿ ಬೀಳುವಂತ ಕಾಲವಿದು. ಸಣ್ಣ ನೆಗಡಿ, ಕೆಮ್ಮಿಗೂ ಸಾವಿರಾರು ರೂಪಾಯಿ ಔಷಧಿ ನೀಡಿ, ಲಾಭದ ಲೆಕ್ಕ ಹಾಕುವ ವೈದ್ಯರೇ ಹೆಚ್ಚಿರುವ ಕಾಲದಲ್ಲಿ. ಇವರಿಗೆಲ್ಲ ಮಾದರಿ ಎಂಬಂತೆ ಗಡಿನಾಡ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಗಡಿ ಜಿಲ್ಲೆಯ ವಿವಿಧ ಗ್ರಾಮಗಳ ಕೂಲಿ-ಕಾರ್ಮಿಕರಿಗೆ, ಬಡವರಿಗೆ ಡಾ. ಪರಸಪ್ಪ ಬಂದ್ರಕಳ್ಳಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದು. ಸುಮಾರು 3 ಸಾವಿರಕ್ಕೂ ಅಧಿಕ ವೃದ್ಧರಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ನೆರವೇರಿಸಿ ಅವರ ಬಾಳಿನ ಬೆಳಕಾಗಿದ್ದಾರೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದವರಾದ ಡಾ.ಪರಸಪ್ಪ ಬಂದ್ರಕಳ್ಳಿ, ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದವರು. ಪ್ರತಿವಾರ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸುತ್ತಾ, ಆ ಶಿಬಿರದಲ್ಲಿ ಅಂದಾಜು 30-40 ವೃದ್ಧರಿಗೆ ಕಣ್ಣಿನ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಇಲ್ಲಿನ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಯ ನೇತ್ರದಾನ ವಿಭಾಗದಲ್ಲಿ ಪ್ರಾಧ್ಯಪಕರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಇಲ್ಲಿನ ನಿತ್ಯ ಜ್ಯೋತಿ ಸಂಸ್ಥೆಗೆ ₹ 40 ಲಕ್ಷ ಅನುದಾನವನ್ನು ನೀಡಿರುವುದು, ಇವರ ಗರಿಮೆಗೆ ಹಿಡಿದ ಕನ್ನಡಿಯಾಗಿದೆ.