ಬಳ್ಳಾರಿ:ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ ಅವರನ್ನು ರಾಜ್ಯ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಮುರಹರಗೌಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬುಡಾ ಅಧ್ಯಕ್ಷ ಹುದ್ದೆಗೆ ಶೇಖರ್ ಅವರನ್ನು ನಾಮನಿರ್ದೇಶನ ಮಾಡಿರುವ ಸರ್ಕಾರದ ಕ್ರಮವು ನಮ್ಮ ಮನಸ್ಸಿಗೆ ನೋವುಂಟು ಮಾಡಿದ್ದು, ಅದರಿಂದ ಪಕ್ಷದ ಕಾರ್ಯಕರ್ತರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ಪಕ್ಷ ಸಂಘಟನೆಗೆ ಹೋದಲ್ಲೆಲ್ಲಾ ವೈಯಕ್ತಿಕವಾಗಿ ಮುಜುಗರ ಅನುಭವಿಸಬೇಕಾಗುತ್ತೆ. ಹಾಗಾಗಿ ಈ ರಾಜೀನಾಮೆ ಪತ್ರವನ್ನು ಕೂಡಲೇ ಅಂಗೀಕರಿಸಬೇಕೆಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ರಾಜೀನಾಮೆ ಪತ್ರ ಬಿಜೆಪಿಯಲ್ಲಿ ಮೂಲ-ವಲಸಿಗರ ನಡುವೆ ಶೀತಲ ಸಮರ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು ಹಾಗೂ ಮೂಲ ಬಿಜೆಪಿಗರ ನಡುವೆ ಶೀತಲ ಸಮರ ಶುರುವಾಗಿದೆ. ಶ್ರೀರಾಮುಲು, ರೆಡ್ಡಿ ಸಹೋದರ ಬಳಗದ ಆಪ್ತರಾದ ದಮ್ಮೂರು ಶೇಖರ್ ಅವರನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರೋದು ಮೂಲ ಬಿಜೆಪಿಗರನ್ನು ಕೆರಳಿಸಿದೆ.
ಹಾಲಿ ಬುಡಾ ಅಧ್ಯಕ್ಷರಾಗಿ ನೇಮಕಗೊಂಡಿರುವ ದಮ್ಮೂರು ಶೇಖರ ಬಳ್ಳಾರಿ ಮೂಲದವರಾಗಿದ್ದರೂ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಲ್ಲ. ಸಚಿವ ಬಿ.ಶ್ರೀರಾಮುಲು ಮತ್ತು ರೆಡ್ಡಿ ಸಹೋದರರ ಬಳಗದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಅವರನ್ನು ಹುದ್ದೆಗೆ ನಾಮನಿರ್ದೇಶನ ಮಾಡಿರೋದು ಪ್ರಾಮಾಣಿಕ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂಬ ದೂರು ಪಕ್ಷದ ಮೂಲನಿವಾಸಿಗರದ್ದಾಗಿದೆ.