ಬಳ್ಳಾರಿ: ಇದು ಪ್ರೇಮಿಗಳಿಬ್ಬರ ಸಂಕಷ್ಟದ ಕತೆ. ಅವರಿಬ್ಬರು ಕಳೆದ 4 ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಮೇಲಾಗಿ ಒಂದೇ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದವರು. ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದಾರೆ. ಆದರೆ, ಈ ಪ್ರೇಮಿಗಳಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ಯುವತಿಯ ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ 28ನೇ ವಾರ್ಡ್ನ ಚಪ್ಪರದಳ್ಳಿ ನಿವಾಸಿ ವಿ ಪಿ ಸೌಮ್ಯಾ ಎನ್ನುವರು ಬಳ್ಳಾರಿಯ ಕುಂಬಾರ ಓಣಿಯ ನಿವಾಸಿಯಾದ ಶರತ್ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರೂ ಬಳ್ಳಾರಿಯ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ಪದವಿ ಮುಗಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದು, ಇದೇ ತಿಂಗಳ 3 ರಂದು ಬಳ್ಳಾರಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಇವರಿಬ್ಬರ ಮದುವೆಗೆ ಜಾತಿ, ಅಂತಸ್ತು ಅಡ್ಡ ಬಂದಿದ್ದು, ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.