ವಿಜಯನಗರ: ರೈತರಿಗೆ ಕಾಡುಪ್ರಾಣಿ ಹಾಗೂ ಪಕ್ಷಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡುವುದು ಸವಾಲಿನ ಕೆಲಸ. ಇದರಿಂದ ತೀವ್ರ ನಷ್ಟ ಅನುಭವಿಸಿದ ಯುವ ರೈತರೊಬ್ಬರು ಅದಕ್ಕೊಂದು ಪರಿಹಾರ ಹುಡುಕಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮ ಸೋವೇನಹಳ್ಳಿಯ ನಾಗರಾಜ ಗೌಡ, ಸ್ವಯಂಚಾಲಿತ ಧ್ವನಿಯಂತ್ರ ಆವಿಷ್ಕಾರ ಮಾಡಿದ್ದು, ಬೆಳೆ ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ.
ಕೃಷಿ ಕುಟುಂಬದಿಂದ ಬಂದಿರುವ ನಾಗರಾಜ ಗೌಡ, ರಸಾಯನ ಶಾಸ್ತ್ರದಲ್ಲಿ ಎಂಎಸ್ಸಿ ಮುಗಿಸಿದ್ದಾರೆ. ಕೊಪ್ಪಳ ಬಳಿಯ ಕಿರ್ಲೋಸ್ಕರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದವರು, ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಹೊಲದಲ್ಲಿಯೇ ಮನೆ ಮಾಡಿಕೊಂಡಿದ್ದು, ಜಮೀನಿನಲ್ಲಿ ಏನೇ ಬೆಳೆ ಹಾಕಿದರೂ ಕರಡಿ, ಕಾಡು ಹಂದಿ, ಜಿಂಕೆ, ನವಿಲು ಇನ್ನಿತರೆ ಪ್ರಾಣಿ-ಪಕ್ಷಿಗಳಿಂದ ಬೆಳೆ ರಕ್ಷಣೆ ಮಾಡುವುದೇ ಇವರಿಗೆ ದೊಡ್ಡ ಸಮಸ್ಯೆಯಾಗಿತ್ತು. ಕಷ್ಟಪಟ್ಟು ಬೆಳೆದ ಬೆಳೆ ಪ್ರಾಣಿ-ಪಕ್ಷಿಗಳ ಪಾಲಾಗುತ್ತಿತ್ತು. ಬೆಳೆ ಕಾಪಾಡಿಕೊಳ್ಳಲು ರೈತ ರಾತ್ರಿ ನಿದ್ದೆ ಬಿಟ್ಟು ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳೆದ ಬೆಳೆ ಕೈಗೆ ಬಾರದೆ ಸಾವಿರಾರು ರೂಪಾಯಿಗಳು ಕಳೆದುಕೊಂಡರು ಪಕ್ಷಿ ಮತ್ತು ಪ್ರಾಣಿಗಳ ಕಾಟದಿಂದಾಗಿ ಬೇಸತ್ತು ಹೋಗಿದ್ರು. ಭೂಮಿಯನ್ನು ಉಳುವುದನ್ನೇ ಬಿಟ್ಟುಬಿಡಬೇಕು ಎಂದು ಎಷ್ಟೋ ಬಾರಿ ಅವರಿಗೆ ಅನಿಸಿತ್ತು. ಪ್ರಾಣಿ ಮತ್ತು ಪಕ್ಷಿಗಳ ಹಾವಳಿ ಹೇಗಾದರೂ ನಿಯಂತ್ರಿಸಬೇಕೆಂದು ಯೋಚನೆ ಶುರು ಮಾಡಿದರು. ಆಗಲೇ ತಲೆಯಲ್ಲಿ ಹೊಳೆದಿದ್ದೇ ಸ್ವಯಂಚಾಲಿತ ಧ್ವನಿಯಂತ್ರ ಸಾಧನ. ಇದನ್ನು ತಯಾರಿಸಲು ಸುಮಾರು ಮೂರು ವರ್ಷ ಶ್ರಮಿಸಿದ್ದಾರೆ.
ತಮಿಳುನಾಡು, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಉಪಕರಣಗಳನ್ನು ತರಿಸಿ ಜೋಡಣೆ ಮಾಡಿ ಯಂತ್ರ ಸಿದ್ಧಪಡಿಸಿದ್ದಾರೆ. ಈ ಯಂತ್ರವು ಪ್ರತಿ 10 ನಿಮಿಷಕ್ಕೊಮ್ಮೆ1 ನಿಮಿಷ ವಿಭಿನ್ನ ರೀತಿಯಲ್ಲಿ ಹುಲಿ, ಸಿಂಹ, ಆನೆ ಹಾಗೂ ಇತರ ಪ್ರಾಣಿಗಳಂತೆ ಸದ್ದು ಮಾಡುತ್ತದೆ. ಒಂದು ಯಂತ್ರದಿಂದ 8-10 ಎಕರೆ ವಿಸ್ತೀರ್ಣದವರೆಗೂ ಸದ್ದು ಕೇಳಿ ಬರುತ್ತಿದ್ದು, ಈ ಸದ್ದಿನಿಂದ ಹೊಲಗಳಿಗೆ ದಾಳಿಯಿಡಲು ಸಜ್ಜಾಗುವ ಪ್ರಾಣಿ ಪಕ್ಷಿಗಳು ಹೆದರಿ ಹಿಂದಕ್ಕೆ ಓಡಿಹೋಗುತ್ತಿವೆ.
12 ವೋಲ್ಟ್ 20 ವ್ಯಾಟ್‌ನ ಸೋಲಾರ್ ಪ್ಯಾನೆಲ್ ಅಳವಡಿಸಿದ್ದು, ಮಳೆಗಾಲದಲ್ಲೂ ಬಳಸಬಹುದಾಗಿದೆ. ಒಂದು ಸಲ ಸೌರಶಕ್ತಿ ಚಾರ್ಜ್ ಆದರೆ 12-15 ಗಂಟೆ ಕಾರ್ಯನಿರ್ವಹಿಸಲಿದೆ. ಬೋರ್ಡ್‌ನಲ್ಲಿ ಲಿಥಿಯಂ ಬ್ಯಾಟರಿ ಜತೆಗೆ ಹಗಲು-ರಾತ್ರಿಯಲ್ಲಿ ಚಾಲನೆ ಮಾಡಲು ಪ್ರತ್ಯೇಕ ಸ್ವಿಚ್ ಜೋಡಿಸಲಾಗಿದೆ. ಧ್ವನಿಮುದ್ರಣಕ್ಕೆ ಯುಎಸ್‌ಬಿ ಅಳವಡಿಸಿದ್ದು, ರೈತರು ತಮಗೆ ಬೇಕಾದ ಧ್ವನಿ ಹೊರಸೂಸುವಂತೆ ಮಾಡಬಹುದು. ಇಲ್ಲವೆ ಮೊದಲೇ ಅಳವಡಿಸಿರುವ ಒಂಬತ್ತು ಬಗೆಯ ಧ್ವನಿಗಳು ಕೆಲಸ ಮಾಡಲಿವೆ. ಇಂತಹ ಸದ್ದಿನಿಂದಾಗಿ ಬೆದರುವ ಪ್ರಾಣಿ- ಪಕ್ಷಿಗಳು ಹೊಲಕ್ಕೆ ಲಗ್ಗೆ ಇಡುವುದು ತಪ್ಪುತ್ತದೆ. ಇದರಿಂದಾಗಿ ಕಷ್ಟಪಟ್ಟು ಕೃಷಿ ಮಾಡಿದ ರೈತರು ಬೆಳೆಗಳನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ರಾಜ್ಯದಲ್ಲಿ ಪ್ರಥಮ: ಮೊದಲೆಲ್ಲ ಡಬ್ಬಕ್ಕೆ ಕೋಲಿನಿಂದ ಬಾರಿಸಿ ಶಬ್ದಮಾಡಿ ಪ್ರಾಣಿ ಪಕ್ಷಿಗಳನ್ನು ಓಡಿಸುತ್ತಿದ್ದರು. ಜೋರಾಗಿ ಕೂಗುತ್ತಾ, ಕೇಕೆ ಹಾಕುತ್ತಾ ಹೊಲದ ತುಂಬಾ ಓಡಾಡಬೇಕಿತ್ತು. ಅನಂತರ ವೈಜ್ಞಾನಿಕತೆ ಮುಂದುವರೆದಂತೆ ಗಾಳಿಗೆ ಬಡಿದುಕೊಳ್ಳುವ ತಮಟೆಯನ್ನು ರೈತರು ಅಳವಡಿಸಿಕೊಂಡರು. ಈಗ ಈ ಸೌರಶಕ್ತಿಯನ್ನು ಬಳಸಿ ಸುಧಾರಿತ ಸಾಧನ ಬಂದಿದೆ. ಈ ರೀತಿ ಮೊದಲು ಹೊರದೇಶಗಳಲ್ಲಿ ಮಾಡಲಾಗಿತ್ತು. ಈಗ ಪ್ರಥಮವಾಗಿ ಕರ್ನಾಟಕದಲ್ಲಿ ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಜಂಗಮಸೋವೇನ ಹಳ್ಳಿಯ ನಾಗರಾಜಗೌಡ ಅಭಿವೃದ್ಧಿ ಪಡಿಸಿ ಪ್ರಯೋಗ ನಡೆಸಿ, ರೈತರಿಗೆ ಸುಲಭ ದರದಲ್ಲಿ ವಿತರಿಸುತ್ತಿದ್ದಾರೆ.
ಇದನ್ನು ತಯಾರಿಸಲು ಹೆಚ್ಚಿನ ಖರ್ಚು ಬೇಕಿಲ್ಲ. ಕಡಿಮೆ ಖರ್ಚಿನಲ್ಲಿ ಇದನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹೀಗಾಗಿ ಬೇಡಿಕೆಯೂ ಹೆಚ್ಚಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಸೌರ ಬೇಲಿ ಅಳವಡಿಸುವ ಬದಲು, ಈ ಧ್ವನಿಯಂತ್ರ ರೈತರಿಗೆ ವರವಾಗಿದೆ. ಅಲ್ಲದೆ ಕೈಗೆಟುಕುವ ದರದಲ್ಲಿ (5 ಎಕರೆಗೆ 8ರಿಂದ10 ಸಾವಿರ ರೂ.) ಸಿಗುತ್ತದೆ. ಇದನ್ನು ತೋಟಗಾರಿಕೆ, ತರಕಾರಿ ಹಾಗೂ ಹೊಲಗಳಲ್ಲಿ ಅಳವಡಿಸಿದರೆ ಕಾಡುಪ್ರಾಣಿಗಳು ಹಾಗೂ ಪಕ್ಷಿಗಳಿಂದ ರಕ್ಷಣೆ ಮಾಡಿಕೊಳ್ಳಬಹುದು. ಈಗ ಜಮೀನಿನಲ್ಲಿ ಸ್ವಯಂಚಾಲಿತ ಧ್ವನಿಯಂತ್ರ ಅಳವಡಿಸಿದ್ದೇನೆ. ಈಗ ಯಾವುದೇ ತೊಂದರೆ ಇಲ್ಲದೆ ಪೂರ್ತಿ ಬೆಳೆ ಕೈಸೇರುತ್ತಿದೆ ಎಂದು ಹೇಳುತ್ತಾರೆ ಯುವ ರೈತ ನಾಗರಾಜಗೌಡ.
ಇದನ್ನೂ ಓದಿ:ಬೈಕ್ ಇಂಜಿನ್‌ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್ : ಪ್ರತಿ ಲೀಟರ್ ಪೆಟ್ರೋಲ್ಗೆ ಮೈಲೇಜ್ ಎಷ್ಟು ಗೊತ್ತಾ?