ವಿಜಯನಗರ : ಪಠ್ಯಪುಸ್ತಕ ತೀವ್ರ ವಿವಾದ ಬೆನ್ನಲ್ಲೇ ಇದೀಗ ನಾಡೋಜ ಗೌರವ ಪದವಿ ಉಪಾದಿ ವಿವಾದ ಶುರುವಾದಂತಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಗೌರವ ಪದವಿಯನ್ನು ಪಡೆದವರು ತಮ್ಮ ಹೆಸರಿನ ಮುಂದೆ ಈ ಉಪಾದಿಯನ್ನು ಬಳಸದಂತೆ ನಿಯಮ ಮಾಡಿದ್ದು, ಈ ಮೂಲಕ ನಾಡೋಜ ಪದವಿ ಪಡೆದ ಗಣ್ಯರು ಪದವಿ ವಾಪಸಿಗೆ ನಾಂದಿ ಹಾಡಿದೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಅಷ್ಟಕ್ಕೂ ಇಷ್ಟು ದಿನಗಳ ಕಾಲ ಇಲ್ಲದ ವಿವಾದ ಈಗೇಕೆ ಅನ್ನೋದು ಹಲವರ ಪ್ರಶ್ನೆಯಾದರೆ, ಪದವಿ ಕೊಟ್ಟ ಮೇಲೆ ಅದನ್ನು ನಾವು ಬಳಕೆ ಮಾಡುವುದರಲ್ಲಿ ತಪ್ಪೇನು ಅನ್ನೋದು ಇನ್ನೂ ಕೆಲವರ ವಾದವಾಗಿದೆ. ಇತ್ತೀಚೆಗೆ ನಡೆದ ಹಂಪಿ ಕನ್ನಡ ವಿವಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
ಸಮಿತಿ ಸಭೆಯ ನಿರ್ಣಯಕ್ಕೆ ವಿವಿ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಂಪಿ ವಿವಿಯಿಂದ ನಾಡೋಜ ಗೌರವಕ್ಕೆ ಪಾತ್ರರಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರು ಈ ಬಗ್ಗೆ ಕನ್ನಡ ವಿವಿಗೆ ಪತ್ರ ಬರೆದಿದ್ದು, ಹೆಸರಿನ ಜೊತೆಗೆ ನಾಡೋಜ ಬಳಸಬಹುದೇ ಎಂದು ಕೇಳಿದ್ದಾರೆ.