ಬಳ್ಳಾರಿ:ಶಾಸಕ ಜಮೀರ್ ಅಹ್ಮದ್ ಕಾಂಗ್ರೆಸ್ನ ಹೈಕಮಾಂಡ್ ಆಗಿದ್ದಾರೆ. ಬಿ ಫಾರಂ ಕೊಡೋರು ಅವರೇ, ಸಿಎಂ ಅಭ್ಯರ್ಥಿ ಆಯ್ಕೆ ಮಾಡೋರು ಅವರೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದ ಸಣ್ಣ ದುರ್ಗಮ್ಮ ಗುಡಿ ಬೀದಿಯಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಮಲ್ಲೇಶ್ವರ, ಚೌಡೇಶ್ವರಿ ದೇವಿಯ ದೇಗುಲದ ಶಿಲಾನ್ಯಾಸ ಪೂಜೆ ನೆರವೇರಿಸಲು ಆಗಮಿಸಿದ ಸಚಿವ ಈಶ್ವರಪ್ಪನವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಚಿವ ಈಶ್ವರಪ್ಪ ಪ್ರತಿಕ್ರಿಯೆ ಓದಿ: Rajinikanth: ಆರೋಗ್ಯ ತಪಾಸಣೆ: ಅಮೆರಿಕಾಗೆ ತೆರಳಿದ ಸೂಪರ್ ಸ್ಟಾರ್ ರಜಿನಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಜಮೀರ್ ಅಹ್ಮದ್ ಘೋಷಿಸಿದ್ದಾರೆ. ಈ ರೀತಿಯಾಗಿ ಯಾರು ಬೇಕಾದರೂ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಬಹುದಾಗಿದೆ. ಅವರಿಗೆ ಪಕ್ಷ, ಹೈಕಮಾಂಡ್ ಇಲ್ಲದಂತಾಗಿದೆ ಎಂದರು.
ಬ್ರಹ್ಮ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಶಾಸಕ ಜಮೀರ್ ಹೇಳಿಕೆಗೆ ಅರ್ಥವೇ ಇಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ನಲ್ಲಿ ಬಿ ಫಾರಂ ಕೊಡೋದು ಜಮೀರ್, ಡಿಕೆಶಿ ಅಥವಾ ಸಿದ್ದರಾಮಯ್ಯನೋ? ಅಂತ ಗೊತ್ತಾಗ್ತಿಲ್ಲ ಎಂದು ಈಶ್ವರಪ್ಪ ಕುಟುಕಿದರು.
ಗೊಂದಲ ಎಲ್ಲವೂ ಶಮನವಾಗಿದೆ:
ಹೆಚ್ ವಿಶ್ವನಾಥ್ ಅವರು ಬಿಜೆಪಿಯವರು, ಬಿಜೆಪಿಯಲ್ಲಿ ಇರುವುದಕ್ಕೆ ಎಂಎಲ್ಸಿ ಆಗಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತ ಇರಲಿಲ್ಲ. ಹೆಚ್ ವಿಶ್ವನಾಥ್ ಸೇರಿದಂತೆ 17 ಜನ ಶಾಸಕರ ಬೆಂಬಲದಿಂದಾಗಿ ರಾಜ್ಯದಲ್ಲಿ ಈ ಬಿಜೆಪಿ ಸರ್ಕಾರ ರಚನೆ ಆಗಿದೆ. ನಿನ್ನೆಯವರೆಗೂ ಕೇಂದ್ರ ನಾಯಕರಾದ ಅರುಣ್ಸಿಂಗ್ ಮುಂದೆ ಎಲ್ಲ ಚರ್ಚೆಯಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನ ತಿಳಿಸಿದ್ದಾರೆ.
ಹೆಚ್. ವಿಶ್ವನಾಥ್, ರೇಣುಕಾಚಾರ್ಯ, ಯತ್ನಾಳ್, ಬೆಲ್ಲದ್ ಯಾರು ಕೂಡ ಬಿಜೆಪಿ ಬಿಡುವುದಿಲ್ಲ. ಗೊಂದಲ, ಸಮಸ್ಯೆ ಇತ್ತು. ಆದರೆ ನಿನ್ನೆ ಅರುಣ್ ಸಿಂಗ್ ಬಂದ ಮೇಲೆ ಎಲ್ಲರಿಗೂ ಸಮಾಧಾನವಾಗಿದೆ. ಬಹಿರಂಗವಾಗಿ ಯಾರು ಕೂಡ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರೆ ಎಂದರು.
ಸಚಿವರಿಂದ ವಾರಾಂತ್ಯದ ಕರ್ಫ್ಯೂ ಉಲ್ಲಂಘನೆ ಆರೋಪ:
ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಸಚಿವ ಕೆ.ಎಸ್. ಈಶ್ವರಪ್ಪ ದೇಗುಲದ ಶಿಲಾನ್ಯಾಸ ನೆರವೇರಿಸುವ ಮುಖೇನ ರಾಜ್ಯ ಸರ್ಕಾರದ ಆದೇಶವನ್ನ ಉಲ್ಲಂಘಿಸಿದ್ದಾರೆ. ವಾರಾಂತ್ಯದ ಕರ್ಫ್ಯೂ ಹಾಗೂ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ದೇಗುಲಗಳಿಗೆ ಸಾರ್ವಜನಿಕರ ಪ್ರವೇಶ, ಪೂಜೆ ಹಾಗೂ ಸಭೆ-ಸಮಾರಂಭವನ್ನ ನಿಷೇಧಿಸಲಾಗಿದೆ. ಆದರೆ, ಬಳ್ಳಾರಿಯಲ್ಲಿಂದು ಈಶ್ವರಪ್ಪ ಮತ್ತು ಅವರ ಕುಟುಂಬ ತಮ್ಮ ಮನೆ ದೇವರ ದೇಗುಲ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ. ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆಂಬ ಆರೋಪವೂ ಕೇಳಿಬಂದಿದೆ.
ಜನಮಾನ್ಯರಿಗೆ ದೇಗುಲ ದರ್ಶನಕ್ಕೂ ಅವಕಾಶ ನೀಡದೇ ರಾಜ್ಯ ಸರ್ಕಾರದ ನಿಯಮ ರೂಪಿಸಿದೆ. ಆದರೆ, ಸಚಿವ ಈಶ್ವರಪ್ಪನವರು ಮಾತ್ರ ದೇಗುಲಕ್ಕೂ ಹೋಗಬಹುದು, ಪೂಜೆಯನ್ನು ಮಾಡಬಹುದಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.