ಬಳ್ಳಾರಿ:ಕರ್ನಾಟಕ-ಆಂಧ್ರಪ್ರದೇಶ ನಡುವಿನ ಗಡಿ ಸರ್ವೇ ವಿವಾದ ಇತ್ಯರ್ಥವಾಗದೇ ಮತ್ತಷ್ಟು ಕಗ್ಗಂಟಾಗಿದೆ. ಕಳೆದ ಎರಡ್ಮೂರು ಬಾರಿ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ಗಳು ಜಿಲ್ಲೆಯ ಅಂತಾರಾಜ್ಯ ಗಡಿ ಭಾಗಕ್ಕೆ ತೆರಳಿ ಗಡಿ ಸರ್ವೇ ಹಾಗೂ ಪಾಯಿಂಟ್ ಫಿಕ್ಸಿಂಗ್ ವಿಳಂಬ ನೀತಿ ಅನುಸರಿಸುತ್ತಿರುವುದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್ ಆರೋಪಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅಕ್ರಮ ಗಣಿ ವಿರುದ್ಧದ ಹೋರಾಟಗಾರ ಟಪಾಲ್ ಗಣೇಶ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಈ ಬಾರಿಯ ಗಡಿ ಸರ್ವೇ ಕಾರ್ಯದ ಮೇಲೆ ನಮಗೆ ಭಾರಿ ಅನುಮಾನ ಬಂದಿದೆ. ಯಾಕೆಂದರೆ 1880ರ ನಕಾಶೆ ಪ್ರಕಾರ ಸರ್ವೇ ಕಾರ್ಯ ಆಗಬೇಕು. ಅದರಂತೆಯೇ ಗಡಿ ಗುರುತು ಮಾಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದರೂ ಕೂಡ ಇಲ್ಲಿ ಕೇಂದ್ರ ಸರ್ಕಾರದ ಅಣತಿಯಂತೆ ನಡೆಯುತ್ತಿದೆ ಎಂದರು.
ಓದಿ:ಮದ್ಯದ ಅಮಲಲ್ಲಿ ಬ್ರೇಕ್ ಆಯಿಲ್ ಸೇವಿಸಿ ಹೆಸ್ಕಾಂ ಇಂಜಿನಿಯರ್ ಸಾವು
ನಾನು ಈ ಮೊದಲೇ ಹೇಳಿದಂತೆ ಹಿಂದ್ ಟ್ರೇಡರ್ಸ್ ಕಂಪನಿ ನೀಡಿರುವ ಕೆಲ ಅಂಶಗಳನ್ನು ಆಧರಿಸಿ ಇಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಹಿಂದ್ ಟ್ರೇಡರ್ಸ್ ಕಂಪನಿಯು ಇದೀಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸಂಬಂಧಿ ವೇಮಣ್ಣ ಎಂಬುವರ ಹೆಸರಿನಡಿ ಎಂಒಯು ಆಗಿದೆ. ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹಸ್ತಕ್ಷೇಪವು ಕೂಡ ಇಲ್ಲಿದೆ ಎಂದು ಗಂಭೀರ ಆರೋಪ ಮಾಡಿದರು.
ಹೀಗಾಗಿ, ಸರ್ವೇ ಕಾರ್ಯ ಹಾಗೂ ಗಡಿ ಗುರುತು ಫಿಕ್ಸಿಂಗ್ ವಿಷಯದಲ್ಲಿ ನನಗೆ ಭಾರೀ ಅನುಮಾನ ಬಂದಿದೆ. ಈ ಸರ್ವೇ ಕಾರ್ಯವು ನ್ಯಾಯಸಮ್ಮತವಾದುದ್ದಲ್ಲ. ಇದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವೆ ಎಂದು ಟಪಾಲ್ ಗಣೇಶ್ ಎಚ್ಚರಿಕೆ ನೀಡಿದ್ದಾರೆ.