ಬಳ್ಳಾರಿ: ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಹಿಂದುಳಿದ ಸಮುದಾಯ ಎಂಬುದು ಬಂದಾಗ ನಾನು ಸಿದ್ದರಾಮಯ್ಯ ಅವರು ಒಂದೇ ಎಂದು ಸಚಿವ ಬಿ. ಶ್ರೀರಾಮುಲು ಹೇಳುವ ಮೂಲಕ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ವಿರುದ್ದ ಸ್ಪರ್ಧಿಸಿದ್ದಾರೆ ಎಂಬ ಕುರುಬ ಸಮುದಾಯದ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಸಚಿವರು, ನಾವು ರಾಜಕೀಯಗೋಸ್ಕರ ಮಾತನಾಡುತ್ತೇವೆ. ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಏನು ಇರೋದಿಲ್ಲ. ನನಗೂ ಬಿಜೆಪಿಯಿಂದ ಮುಖ್ಯಮಂತ್ರಿಯಾಗುವ ಅವಕಾಶ ಬಂದರೆ ಹಿಂದುಳಿದ ಸಮುದಾಯದಿಂದ ಆಗಲಿ, ರಾಮುಲು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರೂ ಒಪ್ಪುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇವೆಲ್ಲ ಮಾಡಬೇಕು. ಇವು ರಾಜಕಾರಣದ ತಂತ್ರಗಾರಿಕೆ, ಇದೆಲ್ಲ ಮಾಡಿಕೊಂಡು ಹೋದರೆ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ ಎಂದರು.
ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮತ್ತು ನಾವು ಮಾಡುತ್ತಿದ್ದೇವೆ. ಹಿಂದುಳಿದ ಸಮುದಾಯಗಳು ಒಂದಾದರೆ ರಾಜ್ಯ ಮತ್ತು ದೇಶದಲ್ಲಿ ಕ್ರಾಂತಿ ಮಾಡಬಹುದು. ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕು. ಹಿಂದುಳಿದ ವಿಚಾರ ಬಂದಾಗ ನಾನು ಮತ್ತು ಸಿದ್ದರಾಮಯ್ಯ ಎಲ್ಲರೂ ಕೂಡ ಒಂದೇ ಎಂದರು.