ಹೊಸಪೇಟೆ:ತುಂಗಭದ್ರಾ ಜಲಾಶಯ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶದ ರೈತರ ಜೀವನಾಡಿಯಾಗಿದೆ. ಜಲಾಶಯಕ್ಕೆ ಭದ್ರತೆ ಹೆಚ್ಚಿಸಲು ಆಡಳಿತ ಮಂಡಳಿಕ್ರಮ ಕೈಗೊಂಡಿದ್ದು, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್ಐಎಸ್ಎಫ್) ಭದ್ರತೆ ಜವಾಬ್ದಾರಿ ವಹಿಸಲಾಗಿದೆ.
ಈ ಮೊದಲು ತುಂಗಭದ್ರಾ ಎಡದಂಡೆ, ಬಲದಂಡೆ ಸೇರಿದಂತೆ ಹಲವು ಕಡೆ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿಗೆ ಭದ್ರತೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಕೆಎಸ್ಐಎಸ್ಎಫ್ ಭದ್ರತೆ ನೀಡಲಿದೆ. ಜಲಾಶಯಕ್ಕೆ ಕೆಎಸ್ಐಎಸ್ಎಫ್ ಭದ್ರತೆ ಒದಗಿಸುವಂತೆ ತುಂಗಭದ್ರಾ ಆಡಳಿತ ಮಂಡಳಿ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾಗಿ ಸರ್ಕಾರ ಮೊದಲ ಹಂತದಲ್ಲಿ 23 ಭದ್ರತಾ ಪೊಲೀಸರನ್ನು ನಿಯೋಜಿಸಿದೆ. ಎರಡನೇ ಹಂತದಲ್ಲಿ 20 ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ.
ಭದ್ರತೆಗೆ ಒತ್ತು:ಕೆಎಸ್ಐಎಸ್ಎಫ್ ಭದ್ರತಾ ಸಿಬ್ಬಂದಿ ಕೈಯಲ್ಲಿ ಬಂದೂಕು ಇರಲಿದೆ. ಇದರಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ತಪ್ಪಲಿದೆ. ಈ ಮುಂಚೆ ಭದ್ರತಾ ಸಿಬ್ಬಂದಿ ಕೈಯಲ್ಲಿ ಲಾಠಿ ಮಾತ್ರ ಇರುತ್ತಿತ್ತು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಉದಾಹರಣೆಗಳಿವೆ. ಇದೀಗ ಕೆಎಸ್ಐಎಸ್ಎಫ್ ಭದ್ರತೆ ಪಡೆಗೆ ಸಂಪೂರ್ಣ ಅಧಿಕಾರ ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಬಹುದುದಾಗಿದೆ.