ಹೊಸಪೇಟೆ: ಗತವೈಭವ ಸಾರುವ ಹಂಪಿ ಇಂದು ಸ್ತಬ್ಧವಾಗಿದೆ. ಹಂಪಿಯ ಬೀದಿಗಳು ನಿಶಬ್ಧವಾಗಿವೆ.ಅಂದಿನ ಕಾಲದ ಯುದ್ಧ ಸನ್ನಿವೇಶಗಳನ್ನು ಕೊರೊನಾ ಆತಂಕ ಮರು ಸೃಷ್ಟಿಮಾಡಿದಂತಿದೆ.
ಐತಿಹಾಸಿಕ ಹಂಪಿ ಪ್ರವಾಸಿಗರಿಲ್ಲದೆ ಬರಿದಾಗಿದೆ. ಇತಿಹಾಸದ ಪುಟಗಳನ್ನು ಮೆಲುಕು ಹಾಕುತ್ತ ಹೋದಂತೆ ಅಂದಿನ ಯುದ್ಧ ಸನ್ನಿವೇಶದ ಸಮಯದಲ್ಲಿ ಸೈನಿಕರು ಕೆಚ್ಚೆದೆಯಿಂದ ರಣಭೂಮಿಯಲ್ಲಿ ಹೋರಾಡುತ್ತಿರುವಾಗ ಜನ ಜೀವ ಭಯದಿಂದ ಏನಾಗುತ್ತೋ ಎಂದು ಮನೆಯಲ್ಲಿ ಕುಳಿತಿರುತ್ತಿದ್ದರು. ಅಂತಹ ದೃಶ್ಯ ನಾವು ಸಿನಿಮಾಗಳಲ್ಲಿಯೂ ನೋಡಿದ್ದೇವೆ. ಎಷ್ಟೋ ಶತಮಾನಗಳ ನಂತರ ಕೊರೊನಾ ವಿಜಯನಗರ ಸಾಮ್ರಾಜ್ಯದಲ್ಲಿ ಯುದ್ಧದ ಸ್ಥಿತಿ ಮರುಸೃಷ್ಟಿ ಮಾಡಿದ್ದಂತೂ ನಿಜ.
ವಿಜಯನಗರದಲ್ಲಿ ಕೊರೊನಾ ಕಾರ್ಮೋಡದ ವಾತಾವರಣ.. ಭವ್ಯ ಪರಂಪರೆ ಎತ್ತಿ ಸಾರುತ್ತಿದ್ದ ಶ್ರೀಕೃಷ್ಣದೇವರಾಯನ ಹಂಪಿ ಸದ್ಯ ಜನರಿಲ್ಲದೆ ಕಳೆಗುಂದಿದೆ. ಮತ್ತೆ ಯುದ್ಧ ಗತಿಸಿ ಎಲ್ಲವನ್ನೂ ಕೊಳ್ಳೆ ಹೊಡೆದಿದ್ದಾರೆ ಎನ್ನುವ ರೀತಿ ಭಾಸವಾಗುತ್ತಿದೆ. ಪ್ರವಾಸಿಗರಿಂದ ತುಂಬಿರುತ್ತಿದ್ದ ಹಂಪಿ ಸದ್ಯ ನಿದ್ರಾಸ್ಥಿತಿಗೆ ಜಾರಿದೆ. ಕೊರೊನಾ ನಿರ್ನಾಮ ಹಿನ್ನೆಲೆ ದೇಶದ ಪ್ರಧಾನಿ ಸಾರಿರುವ ಜನತಾ ಕರ್ಪ್ಯೂಗೆ ಒಳ್ಳೇ ಸ್ಪಂದನೆ ವ್ಯಕ್ತವಾಗಿದೆ.
ವಿರುಪಾಕ್ಷ ದೇವಾಲಯ, ಭೂವನೇಶ್ವರಿ ದೇವಿ, ವಿಜಯ ವಿಠ್ಠಲ, ಕೋದಂಡರಾಮ ಚಕ್ರತೀರ್ಥ, ಆಂಜನೇಯ ಎದುರು ಬಸವಣ್ಣ, ಸಾಸಿವೆ ಕಾಳು ಗಣೇಶ, ಕಡಲೆಕಾಳು ಗಣೇಶ, ಉಗ್ರ ನರಸಿಂಹ, ರಾಣಿ ಸ್ನಾನಗೃಹ, ಗಜ ಶಾಲೆ ಮಂಟಪ, ಮಾತಂಗ ಪರ್ವತ ಸೇರಿ ಇನ್ನೂ ಅನೇಕ ಪ್ರವಾಸಿ ಸ್ಥಳಗಳು ಖಾಲಿ ಖಾಲಿಯಾಗಿವೆ, ಪ್ರವಾಸಿಗರಿಲ್ಲದೆ ರಣ ರಣ ಎನ್ನುತ್ತಿವೆ.
ಬೇಸಿಗೆ ರಜೆಯ ಮೋಜು ಮಸ್ತಿಗೆ ಬ್ರೇಕ್ ಬಿದ್ದಿದೆ. ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದವರ ಬದುಕು ಬೀದಿಗೆ ಬಂದಿದೆ. ಪ್ರವಾಸಿಗರು ನೀಡುತ್ತಿದ್ದ ಬಾಳೆ ಹಣ್ಣು, ಕೊಬ್ಬರಿ ತಿಂದು ಹೊಟ್ಟೆ ತುಂಬಿಕೊಳ್ತಿದ್ದ ಮಂಗಗಳು ಬರೀ ಹೊಟ್ಟೆಯಲ್ಲಿ ಜನರಿಗಾಗಿ ಕಾಯುತ್ತಿವೆ. ಅನಿವಾರ್ಯಯತೆ ಮತ್ತು ಅವಶ್ಯಕತೆ ಎಲ್ಲರನ್ನೂ ಮನೆಯಲ್ಲಿಯೇ ಕೂಡಿ ಹಾಕಿದೆ.