ಬಳ್ಳಾರಿ:ಶ್ವಾನದ ಕುರಿತಾದ '777 ಚಾರ್ಲಿ' ಚಿತ್ರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಅಭಿನಯ ಥಿಯೇಟರ್ನಲ್ಲಿ ಪ್ರೇಕ್ಷಕರನ್ನು ನಗಿಸುವ ಜೊತೆಗೆ ಭಾವುಕರನ್ನಾಗಿಸುತ್ತಿದೆ. ಅದರಲ್ಲೂ ಶ್ವಾನಪ್ರಿಯರಿಗೆ ಇದು ಅದ್ಭುತ ಚಿತ್ರ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೂ ಶ್ವಾನ ಕಂಡ್ರೆ ತುಂಬಾ ಪ್ರೀತಿ. ಅಂತೆಯೇ ಮನೆಯಲ್ಲಿ ನೆಚ್ಚಿನ ನಾಯಿ 'ರಾಖಿ'ಯನ್ನು ತುಂಬಾ ಪ್ರೀತಿಯಿಂದ ಸಾಕಿದ್ದಾರೆ.
ಇದೀಗ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದ ಕೂಡ ಥಿಯೇಟರ್ಗೆ ಬಂದು 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ವಿಶೇಷವೆಂದ್ರೆ ತಮ್ಮ ನೆಚ್ಚಿನ ರಾಖಿ ಜೊತೆ ಸಿನಿಮಾ ವೀಕ್ಷಿಸಿದ ರೆಡ್ಡಿ ಭಾವುಕರಾದರು. ಸಿನಿಮಾ ನೋಡಿದ ಬಳಿಕ ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರಹವೊಂದನ್ನು ಬರೆದು ಪೋಸ್ಟ್ ಮಾಡಿದ್ದಾರೆ. ರಾಖಿ ಜೊತೆಗಿನ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.
'ನನಗೆ ಚಿಕ್ಕಂದಿನಿಂದಲೂ ಶ್ವಾನದ ಮೇಲೆ ಅಪಾರವಾದ ಪ್ರೀತಿ, ಗೋವಿನ ಮೇಲೆ ಭಕ್ತಿಯ ಪ್ರೀತಿ, ಬೆಕ್ಕಿನೊಂದಿಗೆ ಪ್ರೀತಿಯ ಒಡನಾಟ, ಒಟ್ಟಾರೆ ಕೆಲವು ಪ್ರಾಣಿ ಪಕ್ಷಿಗಳೆಂದರೆ ನನಗೆ ಬಲು ಇಷ್ಟ. ನಾನು 2015ರ ಸಮಯದಲ್ಲಿ ಕೆಲವು ಕಷ್ಟದ ದಿನಗಳಿಂದ ನೆಮ್ಮದಿ ಪಡೆದು ಮನೆಗೆ ಬಂದಾಗ ಪ್ರೀತಿಯಿಂದ ನಾಯಿ ಮರಿಯೊಂದನ್ನು ಸಾಕಿದೆನು. ಅದರೊಂದಿಗೆ ಬಲು ಪ್ರೀತಿಯಿಂದ ಕಾಲ ಕಳೆಯುತ್ತಿದ್ದೇನೆ. ಅದಕ್ಕೆ 'ರಾಖಿ' ಎಂದು ನಾಮಕರಣವು ಮಾಡಿದ್ದೇವೆ. ಎಷ್ಟು ನಂಬಿಕೆ ವಿಶ್ವಾಸ, ಇಂತಹ ಪ್ರೀತಿಯ ಪ್ರಾಣಿಯನ್ನು ಅದೇಕೇ ಮೂಖನಾಗಿಸಿದೆ ಭಗವಂತ ಎಂತೆಲ್ಲಾ ಯೋಚಿಸುತ್ತಿರುವಾಗಲೇ ಚಾರ್ಲಿ 777 ಚಿತ್ರದ ಮೂಲಕ ನಾಯಕ ರಕ್ಷಿತ್ ಶೆಟ್ಟಿ ಅವರು ಶ್ವಾನದ ಪ್ರೀತಿ, ವಿಶ್ವಾಸ, ನಂಬಿಕೆ ಇದೆಲ್ಲದರ ಬಗ್ಗೆ ಜಗತ್ತಿಗೆ ಸಾರಿ ತೋರಿಸಿದ್ದಾರೆ.
ಚಾರ್ಲಿ 777 ಚಿತ್ರವನ್ನು ನಾನು ಮತ್ತು ನನ್ನ ಕುಟುಂಬದ ಸದಸ್ಯರು ನೋಡುತ್ತಿದ್ದ ಸಂದರ್ಭದಲ್ಲಿ ರಾಖಿಯು ನನ್ನ ಪಕ್ಕದಲ್ಲಿ ಕುಳಿತು ಚಿತ್ರವನ್ನು ನೋಡುತ್ತಿತ್ತು. ಚಿತ್ರದಲ್ಲಿ ಚಾರ್ಲಿಯನ್ನು ಕಂಡಾಗಲೆಲ್ಲಾ ನಮ್ಮ ರಾಖಿಯ ಕಿವಿ ಅರಳಿ ನಿಲ್ಲುತ್ತಿದ್ದವು. ಅದರ ಪ್ರೀತಿ ಮಮಕಾರ ನನಗೆ ಅರ್ಥವಾಗುತ್ತಿತ್ತು. ಮನಸು ಕರಗಿಸುವ ಚಾರ್ಲಿಯ ಮತ್ತು ರಕ್ಷಿತ್ ಶೆಟ್ಟಿ ನಟನೆ ಅದ್ಭುತ' ಎಂದು ಜನಾರ್ದನ ರೆಡ್ಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲಿ ಕೋಟ್ಯಂತರ ಗಳಿಕೆ; ರಕ್ಷಿತ್ ಸಾಲ ತೀರಿಸಿದ '777 ಚಾರ್ಲಿ'!