ಬಳ್ಳಾರಿ: ಕಲೆ ವಿಲಾಸಕ್ಕಲ್ಲ, ವಿಕಾಸಕ್ಕೆ. ಯಾವುದೇ ಕಲೆಯನ್ನ ಕರಗತ ಮಾಡಿಕೊಳ್ಳಬೇಕಾದರೆ ನಿರಂತರ ಅಭ್ಯಾಸ ಹಾಗೂ ಸತತ ಪ್ರಯತ್ನ ಅಗತ್ಯ. ವಿವಿಧ ಸಾಹಸ ಕ್ರೀಡೆಗಳಲ್ಲಿ ಒಂದಾದ ಕರಾಟೆ ಮಹಿಳೆಯರ ಆತ್ಮರಕ್ಷಣೆಗಾಗಿ ಅತ್ಯಗತ್ಯ ಕಲೆಯಾಗಿದೆ. ಇಂತಹ ಕರಾಟೆಯನ್ನ ಬಾಲ್ಯಾವಸ್ಥೆಯಲ್ಲಿ ಅತ್ಯಂತ ಉತ್ಸುಕತೆಯಿಂದ ಕಲಿಯುತ್ತಿರುವ ಪೋರಿ ಇದೀಗ ಮಲೇಷ್ಯಾದಲ್ಲಿ ಮಿಂಚಲಿದ್ದಾಳೆ.
ಹೌದು, ಕರಾಟೆ ಕಲೆಯನ್ನ ಗಣಿ ಜಿಲ್ಲೆಯ ಹಗರಿಬೊಮ್ಮನ ಚಿಲಕೋಡು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾನಿ ಎಂಬುವವರ ಮಗಳಾದ ಸಾನಿಯಾ ಹಸ್ಮಿ ಕೆಲವೇ ತಿಂಗಳಲ್ಲಿ ಕರಗತ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಈಗ ಮಲೇಷ್ಯಾದಲ್ಲಿ ಮೇ 1 ರಿಂದ 6 ನೇ ತಾರೀಖಿನವರೆಗೂ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ತನ್ನ ಕರಾಮತ್ತು ಪ್ರದರ್ಶಿಸಲಿದ್ದಾಳೆ.
ಮಲೇಷಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ತಯಾರಿ ಕರ್ನಾಟಕದ ಟ್ರೇಡಿಷನಲ್ ಶೋ ಟೋಕಾನ್ ಕರಾಟೆ ಅಕಾಡೆಮಿ ಹಾಗೂ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ನಲ್ಲಿ ತರಬೇತಿ ಪಡೆದಿರುವ ಗಣಿ ಜಿಲ್ಲೆಯ 23 ಕರಾಟೆ ಪಟುಗಳು ಮಲೇಶಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಸರಿ ಸುಮಾರು 23 ಕರಾಟೆ ಪಟುಗಳು ಆಯ್ಕೆಯಾಗಿದ್ದಾರೆ. ಆ ಪೈಕಿ 19 ಮಂದಿ ಬಾಲಕರು ಮತ್ತು ನಾಲ್ಕು ಬಾಲಕಿಯರಿದ್ದಾರೆ. ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ರವಿಕುಮಾರ್ ರೋಹಿಲ್ಲಾ, ಅಮಲ್, ವಂದನಾ ರಾವತ್, ಸಾಯಿಕೃಷ್ಣ, ಅಥುಲ್ ಕೃಷ್ಣ, ಯಶಸ್ ಹೆಗಡೆ, ಹರ್ಷವರ್ಧನ, ನಬಿಸಾಹೇಬ್, ರವಿತೇಜ, ಜಡೇಶಾ, ಹುಲುಗಣ್ಣ, ಬಸವರಾಜ, ನಾಗರಾಜ, ಕಟ್ಟೇಸ್ವಾಮಿ, ಸುಭಾಷ್ ಚಂದ್ರ. ಕಲರ್ ಬೆಲ್ಟ್ ವಿಭಾಗದಲ್ಲಿ ಅನೂಪ್ ಪಿಸಾ, ನಿಶ್ಚಯ್ಕುಮಾರ, ವೈಶಾಲಿ, ಸೃಷ್ಠಿ, ಸಾನಿಯಾ ಹಸ್ಮಿ, ಚಿನ್ಮಯ ದಾಸ, ಅದೀಪ್ ಕುಮಾರ, ಧ್ರುವ ಪಾಟೀಲ್ ಇದ್ದಾರೆ.
ಕರಾಟೆ ಅಸೋಸಿಯೇಷನ್ ಸಹಾಯ ಹಸ್ತ:
ಮಲೇಶಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 23 ಕರಾಟೆ ಪಟುಗಳಲ್ಲಿ ಒಂಬತ್ತು ಮಂದಿಗೆ ತಲಾ 10,000 ರೂ.ಗಳಂತೆ 90,000 ರೂ.ಗಳ ಸಹಾಯ ಧನವನ್ನ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ನೀಡಿದೆ. ಅವರು ಬಳ್ಳಾರಿಯ ತೋರಣಗಲ್ಲು ಏರ್ಪೋರ್ಟ್ನಿಂದ ಬೆಂಗಳೂರಿಗೆ ತೆರಳಲಿದ್ದಾರೆ. ಅಲ್ಲಿಂದ ಮಲೇಷ್ಯಾಕ್ಕೆ ತೆರಳುವ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಸೋಸಿಯೇಷನ್ ಅಧ್ಯಕ್ಷ ಪೋಲಾ ಆನಂದ ಈ ಟಿವಿ ಭಾರತಗೆ ತಿಳಿಸಿದ್ದಾರೆ.