ಬಳ್ಳಾರಿ: ಜಿಲ್ಲಾದ್ಯಂತ ಒಳಚರಂಡಿ (ಯುಜಿಡಿ) ನೀರನ್ನು ರಾಜ ಕಾಲುವೆಗೆ ಹರಿಬಿಡುವ ಮುಖೇನ ಸುತ್ತಲಿನ ಪರಿಸರ ಹದಗೆಟ್ಟಿದ್ದು, ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಒಳಚರಂಡಿ ನೀರು ಶುದ್ಧೀಕರಿಸಿ ಗಿಡ, ಮರಗಳಿಗೆ ಪೂರೈಕೆ ಮಾಡಬಹುದು ಎಂಬ ಆಲೋಚನೆಯೊಂದನ್ನು ಗಣಿ ನಗರಿಯ ಖಾಸಗಿ ಕಾಲೇಜೊಂದು ಹುಟ್ಟುಹಾಕಿದೆ.
ಹೌದು, ಬಳ್ಳಾರಿ ನಗರ ವ್ಯಾಪ್ತಿಯ ಅಲ್ಲೀಪುರ ಬಳಿಯಿರುವ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಕಳೆದ ಎರಡು ವರ್ಷಗಳ ಹಿಂದಷ್ಟೇ ಯುಜಿಡಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿದೆ. ನಿತ್ಯ 325 ಕೆಎಲ್ಡಿ ಒಳಚರಂಡಿ ನೀರನ್ನು ಶುದ್ಧೀಕರಿಸಿ, ಅಂದಾಜು 300 ಕ್ಕೂ ಅಧಿಕ ಗಿಡ, ಮರಗಳನ್ನು ಈ ಕಾಲೇಜಿನ ಆವರಣದಲ್ಲಿ ಬೆಳೆಸಲಾಗಿದೆ. ಅದರಂತೆಯೇ ಮಳೆ ನೀರು ಕೊಯ್ಲು ಯೋಜನೆಯು ಜಾರಿಯಲ್ಲಿದೆ.
ಬೃಹತ್ ಕಾಲೇಜು ಕಟ್ಟಡದ ಕೆಳಭಾಗದಲ್ಲಿ ಮಳೆ ನೀರು ಕೊಯ್ಲಿಗೆ ಪೈಪ್ಲೈನ್ ಸಂಪರ್ಕ ಮಾಡಲಾಗಿದೆ. ಕಾಲೇಜು ಆವರಣದ ಒಂದು ಮೂಲೆಯಲ್ಲಿ ಈ ಮಳೆ ನೀರು ಸಂಗ್ರಹಗೊಳ್ಳುವ ಪಾಯಿಂಟ್ ಅನ್ನು ಗುರುತಿಸಲಾಗಿದೆ. ಆ ಮೂಲಕ ಮಳೆ ನೀರು ಕೊಯ್ಲು ಮಾಡಲಾಗುತ್ತದೆ.