ಹೊಸಪೇಟೆ (ವಿಜಯನಗರ):ಲಾರಿ ಅಪಘಾತ ಮಾಡಿ ಮೂರು ಜನರ ಸಾವಿಗೆ ಕಾರಣವಾದ ಚಾಲಕನಿಗೆ 11 ತಿಂಗಳು ಜೈಲು ಶಿಕ್ಷೆ ಹಾಗೂ 7,500 ದಂಡವನ್ನು ವಿಧಿಸಿ ನಗರದ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಲಾರಿ ಚಾಲಕನಿಗೆ 11 ತಿಂಗಳು ಜೈಲು ಶಿಕ್ಷೆ, 7,500 ರೂ. ದಂಡ ವಿಧಿಸಿದ ಕೋರ್ಟ್! 2013ರ ಡಿಸೆಂಬರ್ 6ರಂದು ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ರುದ್ರಪ್ಪನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೊಸಪೇಟೆ ಸಂಚಾರಿ ಪೊಲೀಸರು ತನಿಖೆ ನಡೆಸಿ, ಪಿಎಸ್ಐ ಸಲೀಂ ಪಾಷಾ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ತೃಪ್ತಿ ಧರಣಿ, ಚಾಲಕನಿಗೆ 11 ತಿಂಗಳು ಜೈಲು ಶಿಕ್ಷೆ ಹಾಗೂ 7,500 ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ಕೂಡ್ಲಿಗಿ ತಾಲೂಕಿನ ಕೆರೆಕಾವಲ ಹಟ್ಟಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ. ಮಾರೇಶ್ ( 18) ಮೃತ ಯುವಕ. ಮಾರೇಶ್ ಕೆರೆಕಾವಲ ಹಟ್ಟಿಯಿಂದ ಕೂಡ್ಲಿಗಿ ಕಡೆ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಫೆಬ್ರವರಿ 20ರಂದು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಚಿಲಕನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ.