ಬಳ್ಳಾರಿ:ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ವೆಂಟಿಲೇಟರ್ ಕೊರತೆಯಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ವೆಂಟಿಲೇಟರ್ ಕೊರತೆಯನ್ನು ನೀಗಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.
ವೆಂಟಿಲೇಟರ್ಗಳ ಪೂರೈಕೆಗೆ ಆದಷ್ಟು ಬೇಗ ಸೂಕ್ತಕ್ರಮ ಕೈಗೊಳ್ಳಲಾಗುವುದು: ಆರೋಗ್ಯ ಸಚಿವ ಬಿ.ಶ್ರೀರಾಮುಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಹಾಗೂ ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆಯಿರುವ ಬಗ್ಗೆ ಜಿಲ್ಲಾಧಿಕಾರಿ ನಕುಲ್, ಡಿಹೆಚ್ಒ ಡಾ.ಜನಾರ್ದನ, ವಿಮ್ಸ್ ನಿರ್ದೇಶಕ ಡಾ.ದೇವಾನಂದ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಆದಷ್ಟು ಬೇಗನೆ ಈ ವೆಂಟಿಲೇಟರ್ಗಳನ್ನು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಕೇರ್ ಸೆಂಟರ್ನಲ್ಲಿರುವ ಐಸಿಯುಗೆ ಹಿರಿಯ ವೈದ್ಯರು ಭೇಟಿ ಕೊಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿವೆ. ಯುವ ವೈದ್ಯರೇ ಹೆಚ್ಚಾಗಿ ಭೇಟಿ ಕೊಡುತ್ತಾರೆ. ಹೀಗಾಗಿ, ಕೋವಿಡ್ ಕೇರ್ ಸೆಂಟರ್ನಲ್ಲಿರುವ ಗಂಭೀರ ಸ್ವರೂಪದ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಅಲ್ಲಲ್ಲಿ ಕೇಳಿಬಂದಿವೆ. ಅದನ್ನು ಪರಿಶೀಲಿಸಿ, ಹಿರಿಯ ವೈದ್ಯರೊಂದಿಗೆ ಚರ್ಚಿಸಿ ಐಸಿಯುಗೆ ಆಗಾಗ ಭೇಟಿ ಕೊಡಲು ಸೂಚಿಸುವುದಾಗಿ ತಿಳಿಸಿದರು.
ಬೆಳಗಾವಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಂದರ್ಭ ಏನೋ ಅಚಾತುರ್ಯ ನಡೆದಿರೋ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಅಲ್ಲೇನಾಗಿದೆ ನೋಡಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.